ಈಗ ಆಹಾರ ಭದ್ರತೆಯಲ್ಲ, ಆಹಾರ ಸಮಾನತೆ ಕೇಳಬೇಕಾಗಿದೆ -ಪಿ.ಸಾಯಿನಾಥ್

ಸಂಪುಟ: 
10
ಸಂಚಿಕೆ: 
05
Sunday, 24 January 2016

ಅಖಿಲ ಭಾರತ ಅಂಗನವಾಡಿ ನೌಕರರ ಮತ್ತು ಸಹಾಯಕಿಯರ ಒಕ್ಕೂಟ 25 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ‘ಅಪೌಷ್ಟಿಕತೆ, ಸರಕಾರದ ಧೋರಣೆಗಳು ಮತ್ತು ಐಸಿಡಿಎಸ್’ ಎಂಬ ವಿಷಯದ ಮೇಲೆ ಒಂದು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಮಾತಾಡುತ್ತ ಪ್ರಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ದೇಶದಲ್ಲೀಗ ಆಹಾರ ಭದ್ರತೆಗಿಂತ ಹೆಚ್ಚಾಗಿ ಆಹಾರ ಸಮಾನತೆ ಬೇಕಾಗಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಯಾವುದೇ ಅಧಿಕಾರಿಗಿಂತಲೂ ಹೆಚ್ಚು ಮಹತ್ವದ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ದೇಶದಲ್ಲೀಗ ಅಸಮಾನತೆ ಅಸಹನೀಯ ಮಟ್ಟ ತಲುಪುತ್ತಿದೆ. ದೇಶದ 1 ಶೇಕಡಾ ಜನ ದೇಶದಲ್ಲಿನ ಕುಟುಂಬ ಸಂಪತ್ತುಗಳಲ್ಲಿ 49 ಶೇಕಡಾದ ಮೇಲೆ ಒಡೆತನ ಪಡೆದಿದ್ದಾರೆ, ಕೇವಲ 15 ಬಿಲಿಯಾಧಿಪತಿಗಳು 50ಶೇಕಡಾ ಜನಗಳಿಗಿಂತ ಹೆಚ್ಚಿನ ಸಂಪತ್ತು ಹೊಂದಿದ್ದಾರೆ. 70ಶೇಕಡಾ ಕುಟುಂಬಗಳ ವಾರ್ಷಿಕ ಆದಾಯ 5000ರೂ.ಗಿಂತ ಕಡಿಮೆಯಿದೆ. ಇದು ಸಾಲದ್ದಕ್ಕೆ ಈಗ ನೀರಿನ ಖಾಸಗೀಕರಣದತ್ತವೂ ಹೆಜ್ಜೆಯಿಟ್ಟಿದ್ದು, ನೀರಿನ ಅಸಮಾನತೆಯೂ ಧಾವಿಸಿ ಬರುತ್ತಿದೆ. ಶಿಕ್ಷಣದ ಖಾಸಗೀಕರಣದಿಂದ 40ಕೋಟಿ ಭಾರತೀಯರು ಯಾವುದೇ ಶಿಕ್ಷಣ ಸಂಸ್ಥೆಯ ಮೆಟ್ಟಿಲು ತುಳಿಯದಂತಾಗಿದೆ. ಯಾವ ಸಮಾಜವೂ ಇಂತಹ ಅಸಮಾನತೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಾತಾಡುತ್ತ ಅಂಗನವಾಡಿ ಒಕ್ಕೂಟದ ಉಪಾಧ್ಯಕ್ಷರೂ, ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿಯೂ ಆದ ಕೆ.ಹೇಮಲತಾ ತಮ್ಮ ಒಕ್ಕೂಟ ಐಸಿಡಿಎಸ್‍ನ ಫಲಾನುಭವಿಗಳು, ರೈತರು, ಕೃಷಿಕೂಲಿಕಾರರು, ಮಹಿಳೆಯರು ಮತ್ತು ಕಾರ್ಮಿಕರ ಸಂಘಟನೆಗಳೊಂದಿಗೆ ಸೇರಿಕೊಂಡು ಐಸಿಡಿಎಸ್ ಉಳಿಸುವ ಒಂದು ಪ್ರಚಾರಾಂದೋಲನವನ್ನು ಆರಂಭಿಸಿದೆ ಎಂದರು.