ಯು.ಜಿ.ಡಿಯಲ್ಲಿ ಪೌರಕಾರ್ಮಿಕರನ್ನು ಇಳಿಸಿ ಕೆಲಸ ಮಾಡಿಸಿದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹ

ಸಂಪುಟ: 
10
ಸಂಚಿಕೆ: 
05
Wednesday, 20 January 2016

ಬೆಂಗಳೂರು, ಜ.19: ಜನವರಿ 18ರಂದು ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ನಗರಸಭೆ ವ್ಯಾಪ್ತಿಯ ಶಂಕರಮಠದ ಹತ್ತಿರ ಆರೋಗ್ಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯವರು ಸಾರ್ವಜನಿಕ ಒಳಚರಂಡಿಯೊಳಗೆ ಯಾವುದೇ ಸುರಕ್ಷತಾ ಸಲಕರಣೆಗಳನ್ನು ನೀಡದೆ ಕಾನೂನು ಬಾಹಿರವಾಗಿ ಪೌರಕಾರ್ಮಿಕರನ್ನು ಇಳಿಸಿರುವ ಘಟನೆಯನ್ನು ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ ಸಿಐಟಿಯು ಖಂಡಿಸುತ್ತದೆ ಎಂದು ಪ್ರಧಾನ ಕಾರ್ಯದರ್ಶಿಯಾದ ಸೈಯದ್ ಮುಜೀಬ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೀರ ಇತ್ತಿಚೇಗೆ ತುಮಕೂರಿನ ಪಿಟ್ ಗುಂಡಿಯಲ್ಲಿ ಇಬ್ಬರು ಪೌರಕಾರ್ಮಿಕರ ಮರಣ ಹಾಗೂ ಬೆಂಗಳೂರಿನ ಬಹುಮಹಡಿ ಕಟ್ಟಡದಲ್ಲಿ ಮೂರು ಜನ ಕಾರ್ಮಿಕರ ಸಾವಿನ ಪ್ರಕರಣಗಳು ಹಸಿರಾಗಿರುವಾಗಲೇ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಕಾನೂನು ಬಾಹಿರವಾಗಿ ಪೌರಕಾರ್ಮಿಕರನ್ನು ಪಿಟ್ ಗುಂಡಿಗೆ ಇಳಿಸಿರುವ ಕ್ರಮ ಅಧಿಕಾರಿಗಳ ಅಸಡ್ಡೆ ಹಾಗೂ ಕಾನೂನುಗಳಿಗೆ ಗೌರವ ನೀಡದ ವರ್ತನೆಯನ್ನು ತೋರುತ್ತದೆ ಎಂದು ಮುನಿಸಿಪಲ್ ಕಾರ್ಮಿಕರ ಸಂಘ ಸಿಐಟಿಯು ಆಪಾದಿಸಿದೆ.

ಇತ್ತೀಚಿಗೆ ಸಫಾಯಿ ಕರ್ಮಚಾರಿಗಳ ಸಂರಕ್ಷಣಾ ಕಾಯ್ದೆಗೆ ಆಗಿರುವ ತಿದ್ದುಪಡಿಗಳನ್ನು ವ್ಯಾಪಕವಾಗಿ ಪ್ರಚಾರಪಡಿಸುವ ಹಾಗೂ ಸಮಾಜದಲ್ಲಿ ಈ ಹೀನ ಪದ್ದತಿಯನ್ನು ನಿಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರೆ ಇಲಾಖೆಗಳು ತುಂಬಾ ಕೆಲಸ ಮಾಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಮಘ ಅಭಿಪ್ರಾಯಪಟ್ಟಿದೆ. ತಪ್ಪಿತಸ್ಥ ಅಧಿಖಾರಿಗಳ ಮೇಲೆ ಮೊಕದ್ದಮೆ ಹೂಡಿ ಅವರನ್ನು ಬಂಧಿಸುವಂತೆಯೂ ಸಹ ಸಂಘವು ಆಗ್ರಹಿಸಿದೆ.