ಗಂಗಾವತಿ ಹಾಸ್ಟಲ್ ವಿದ್ಯಾರ್ಥಿಗಳಿಂದ ಶಾಸಕರ ಕಛೇರಿಗೆ ಮುತ್ತಿಗೆ

ಸಂಪುಟ: 
10
ಸಂಚಿಕೆ: 
04
Sunday, 17 January 2016

ಗಂಗಾವತಿ, ಜ.16: ತಾಲ್ಲೂಕಿನ ನಗರ ಮತ್ತು ಗ್ರಾಮೀಣ ಭಾಗದ ಶಾಲೆಗಳು, ಪಿಯು, ಮತ್ತು ಡಿಗ್ರಿ ಕಾಲೇಜುಗಳು ಕನಿಷ್ಠ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ, ಡೆಸ್ಕ್ ಗಳು, ಕೊಠಡಿ, ಸೈಕಲ್ ಸ್ಟಾಂಡ್, ಶಿಕ್ಷಕರು/ಉಪನ್ಯಾಸಕರ ಕೊರತೆಯಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ ಮತ್ತು ಅನೇಕ ಹಳ್ಳಿಗಳಿಂದ ಬರುವ ಹಿಂದುಳಿದ, ಬಡ ದಲಿತ, ಅಲ್ಪಸಂಖ್ಯಾತ ವಿಧ್ಯಾರ್ಥಿಗಳೇ ಹೆಚ್ಚಾಗಿ ವಿದ್ಯಾಭ್ಯಾಸ ಮಾಡಲು ಬರುತ್ತಿದ್ದು ಶಾಲಾ ಕಾಲೇಜಿನ ಸಮಯಕ್ಕೆ ಅನುಗುಣವಾಗಿ ಬಸ್ ಸೌಲಭ್ಯವಿಲ್ಲದೆ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ.) ವತಿಯಿಂದ ಶಾಸಕರ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ನಗರದ ಹಾಸ್ಟೆಲ್ ಗಳ ಬಯಸಿ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ಹಾಸ್ಟೇಲ್ ಗಳಿಲ್ಲ ಇರುವ ಹಾಸ್ಟೇಲ್ ಗಳಲ್ಲಿ ವಾಸ ಮಾಡುತ್ತಿರುವ ವಿದ್ಯಾರ್ಥಿಗಳ ಬದುಕು ನಿತ್ಯ ನರಕವಾಗಿದೆ, ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ, ವಸತಿ ಸಮಸ್ಯೆಯಿಂದಾಗಿ ಒಂದು ಕೋಣೆಯಲ್ಲಿ 15-20 ವಿದ್ಯಾರ್ಥಿಗಳು ವಾಸ ಮಾಡುತ್ತಿದ್ದಾರೆ, ಪೌಷ್ಠಿಕ ಆಹಾರವಿಲ್ಲದೆ ವಿದ್ಯಾರ್ಥಿಗಳ ಆರೋಗ್ಯ ಏರುಪೇರಾಗುತ್ತಿದ್ದು, ಸರ್ಕಾರ ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ-33ರೂ, ಮೆಟ್ರಿಕ್ ನಂತರ-36ರೂ ಆಹಾರ ಭತ್ಯೆ ನೀಡುತ್ತಿದೆ, ಈ ಆಹಾರ ಭತ್ಯೆ ಈಗಿನ ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ಸಾಕಾಗುವುದಿಲ್ಲ, ಗಂಗಾವತಿಯಲ್ಲಿ ಸ್ನಾತಕೋತ್ತರ ಹಾಸ್ಟೇಲ್ ಮಂಜೂರಾತಿ ಮಾಡಬೇಕು. ಎಸ್.ಕೆ.ಎನ್.ಜಿ ಕಾಲೇಜಿನಲ್ಲಿ ಅಭ್ಯಾಸ ಮಾಡುವ ಬಿ.ಎ, ಬಿ.ಕಾಂ, ಬಿ.ಎಸ್ಸಿ. ಬಿ.ಬಿ.ಎಂ, ವಿದ್ಯಾರ್ಥಿಗಳಿಗೆ ಸಿಲೆಬಸ್ ತಕ್ಕಂತೆ ಪುಸ್ತಕಗಳನ್ನು ಒದಗಿಸಬೇಕು. ಎಸ್.ಸಿ. ಎಸ್.ಟಿ. ವಿದ್ಯಾರ್ಥಿಗಳ ಬಾಕಿ ಇರುವ ವಿದ್ಯಾರ್ಥಿ ವೇತನ ಕೊಡಲೇ ಬಿಡುಗಡೆ ಮಾಡಬೇಕು. ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಹಣ ಬಿಡುಗಡೆ ಮಾಡಬೇಕೆಂದು ಆಹಾರ ಭತ್ಯೆ ತಿಂಗಳಿಗೆ 3500 ಹೆಚ್ಚಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ನಗರದಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ಖಾಸಗಿ ಶಾಲಾ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪೊಷಕರಿಗೆ ವಂಚಿಸಿ ಹಣ ಮಾಡುವ ದಂಧೆಯಲ್ಲಿ ತೊಡಗಿವೆ, 1983 ರ ಕಾಯ್ದೆ ಕೊಠಾರಿ ಆಯೋಗದ ಪ್ರಕಾರ ಡೋನೆಷನ್ ಹಾವಳಿ ನಿಲ್ಲಿಸುವಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ರೇಗ್ಯೂಲ್ಭೆಟಿಂಗ್ ಪ್ರಾಧಿಕಾರ ರಚಿಸಿ, ಶಾಲಾ ಅಭಿವೃದ್ದಿಯ ಹೆಸರಿನಲ್ಲಿ ಹಣ ವಸೂಲಿ ಮಾಡುವುದನ್ನು ಕಡಿವಾಣ ಹಾಕಲು ಕ್ರಮವಹಿಸಬೇಕು, ತಾಲೂಕಿನಲ್ಲಿರುವ ಎಲ್ಲಾ ಶಾಲಾ ಕಾಲೇಜುಗಳ ಅಧ್ಯಕ್ಷರು ತಾವು ಇರುವುದರಿಂದ, ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಎಸ್ ಎಫ್ ಐ ಸಂಘಟನೆಯ ನೂರಾರು ವಿದ್ಯಾರ್ಥಿಗಳು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಅಧ್ಯಕ್ಷರಾದ ಮಂಜುನಾಥ ಡಗ್ಗಿ, ಕಾರ್ಯದರ್ಶಿ ಗ್ಯಾನೇಶ ಕಡಗದ, ಮುಖಂಡರಾದ ಕನಕರಾಯ, ನಾಗರಾಜ, ಮಾರೆಪ್ಪ, ಆಂಜನೇಯ, ನಾಗರಾಜ ಯು, ಮರಿಯಪ್ಪ. ಲೋಕೇಶ. ಮರಿನಾಗ, ಹಾಗೂ ಶಾಲಾ-ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.