ಮೂಲಭೂತ ಸೌಲಭ್ಯ ವಂಚಿತ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

ಸಂಪುಟ: 
10
ಸಂಚಿಕೆ: 
04
Sunday, 17 January 2016

ಕೊರಟಗೆರೆ, ಜ.13 : ತಾಲ್ಲೂಕಿನ ಕೇಂದ್ರ ಭಾಗದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಆಗಮಿಸುತ್ತಿದ್ದು ಜೊತೆಗೆ ಇಲ್ಲಿ ಪೌಢಶಾಲೆಯು ಸಹ ಇದ್ದು ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಸರ್ಕಾರ ಸರ್ಕಾರಿ ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಖಾಸಗಿ ಶಾಲಾ-ಕಾಲೇಜಿನ ಬದಲಾಗಿ ಸರ್ಕಾರಿ ಶಾಲಾ ಕಾಲೇಜುಗಳಿಗೆ ಬರುವಂತಾಗಬೇಕು. ಈಗ ಕಾಲೇಜಿನ ಆವರಣದಲ್ಲಿ ಬಿ.ಇ.ಓ ಕಛೇರಿ ನಿರ್ಮಿಸಲು ಮುಂದಾಗಿರುವುದನ್ನು ಕೈಬಿಟ್ಟು ಬೇರೆಡೆ ನಿರ್ಮಿಸಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಮತ್ತು ಭಾರತ ವಿದ್ಯಾರ್ಥಿ ಫೆಡರೇಷನ್ ನ  ತಾಲ್ಲೂಕು ಸಮಿತಿಗಳು ಒತ್ತಾಯಿಸಿವೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬಿ.ಇ.ಓ ಕಛೇರಿಯ ಹೊಸ ಕಟ್ಟಡ ನಿರ್ಮಾಣ ಮಾಡಲು ಮುಂದಾಗುತ್ತಿರುವುದನ್ನು ಕೈಬಿಟ್ಟು ಬೇರೆ ಸ್ಥಳದಲ್ಲಿ ಬೇರೆಡೆ ನಿರ್ಮಿಸಲು ತಾಲ್ಲೂಕು ಆಡಳಿತ ಕ್ರಮವಹಿಸಬೇಕು, ವಿದ್ಯಾಥಿಗಳ ವಿದ್ಯಬ್ಯಾಸಕ್ಕಾಗಿ ಕಾಲೇಜಿನ ಆವರಣದಲ್ಲಿ ಕಾಲೇಜಿಗೆ ಸಂಬಂದಿಸಿದ ಹೆಚ್ಚುವರಿ ಕಟ್ಟಡಗಳ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯದ ವ್ಯವಸ್ಥೆ ಮತ್ತು ಸುಸಜ್ಜತವಾದ ಗ್ರಂಥಾಲಯದ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಇದಕ್ಕಾಗಿ ಮಾನ್ಯ ಗೃಹಮಂತ್ರಿಗಳಾಗ ಡಾ||ಜಿ.ಪರಮೇಶ್ವರ, ಶಾಸಕರಾದ ಪಿ.ಆರ್.ಸುಧಾಕರ್‍ಲಾಲ್ ಇತ್ತ ಗಮನ ಹರಿಸಿ ಕಾಲೇಜಿನ ಅಭಿವೃದ್ಧಿಗಾಗಿ ಹೆಚ್ಚಿನ ಗಮನವನ್ನು ಹರಿಸಬೇಕು.

ಸಾವಿರಾರು ಸಂಖ್ಯೆಯ ಬಡವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನೆರವಾಗಬೇಕು ಎಂದಿರುವ ಡಿವೈಎಫ್ ಐ ಮತ್ತು ಎಸ್ ಎಫ್ ಐ ಸಂಘಟನೆಗಳು ಪಿ.ಯು ಇಲಾಖೆಯು ಕೂಡ ಇತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದೆ. ಸರ್ಕಾರಿ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರನ್ನು ಭರ್ತಿ ಮಾಡಬೇಕು, ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಖಾಯಂ ಮಾಡಬೇಕು ಎಂದು ಸಂಘಟನೆಗಳು ಒತ್ತಾಯಿಸುತ್ತವೆ.

ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಉಪಾಧ್ಯಕ್ಷರಾದ ಎಂ.ಜಿ.ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್.ನಾಗರಾಜು, ಮುಖಂಡರಾದ ರಾಘವೇಂದ್ರ ಮತ್ತು ಮಂಜುಸ್ವಾಮಿ ವಹಿಸಿದ್ದರು.