ಬೆಳೆ ಪರಿಹಾರ ಪಾವತಿಗಾಗಿ ರೈತ ಸಭೆಯಲ್ಲಿ ಆಗ್ರಹ

ಸಂಪುಟ: 
10
ಸಂಚಿಕೆ: 
04
Sunday, 17 January 2016

ರಾಮದುರ್ಗ, ಜ.13: ಮುಂಗಾರು ಹಂಗಾಮಿನ ಬೆಳೆ ಹಾನಿ ಸಮೀಕ್ಷೆ ಮಾಡಿ ಅನೇಕ ತಿಂಗಳು ಕಳೆದರೂ ಇನ್ನೂವರೆಗೆ ಬೆಳೆ ಪರಿಹಾರ ನೀಡದೇ ಇರುವ ಸರಕಾರದ ವಿಳಂಬ ನೀತಿಯನ್ನು ತಾಲೂಕಿನ ರೈತರು ಖಂಡಿಸಿದರು.

ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದ ರೈತರ ಸಭೆಯನ್ನು ಉದ್ದೇಶಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ವ್ಹಿ.ಪಿ.ಕುಲಕರ್ಣಿಯವರು, ಮುಂಗಾರು ಬೆಳೆಗಳು ಸಂಪೂರ್ಣ ವಿಫಲವಾಗಿ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರಕಾರ ರಾಜ್ಯದ 147 ತಾಲೂಕಗಳನ್ನು ಬರಗಾಲವೆಂದು ಘೋಷಣೆ ಮಾಡಿ ವರ್ಷ ಕಳೆದರೂ ಪರಿಹಾರ ಇಲ್ಲ. ಕೇಂದ್ರದಿಂದ ಬರ ಪರಿಹಾರಕ್ಕಾಗಿ 1543 ಕೋಟಿ ರೂಪಾಯಿ ಹಣ ಬಂದಿದೆ. ನಮ್ಮ ಜಿಲ್ಲೆಗೆ ರೂ. 247 ಕೋಟಿ ಪರಿಹಾರ ಬಂದಿದ್ದರು ರೈತರ ಕೈಗೆ ಬೆಳೆ ಪರಿಹಾರದ ಹಣ ಬಂದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬು ಬೆಳೆಗಾರ ಸಂಘದ ಮುಖಂಡರಾದ ಶ್ರೀ ವಾಯ್.ಎಚ್. ಪಾಟೀಲರವರು ಮಾತನಾಡಿ ಕೃಷಿ ಬಿಕ್ಕಟ್ಟು ತೀವೃವಾಗುತ್ತಿದೆ ಇಂತಹ ಸಮಯದಲ್ಲಿ ಬೆಳೆ ಪರಿಹಾರ ಬರಬಹುದೆಂದು ರೈತರು ಸಮಾಧಾನ ಪಡುತ್ತಿರುವಾಗಲೇ ಜಿಲ್ಲಾ ಹಾಗೂ ತಾಲೂಕಾ ಆಡಳಿತ ವರ್ಗ ಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ವಿಷಾದನೀಯ. ದೇಶದಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ ಇದರ ವಿರುದ್ಧ ರೈತರೆÀಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕೆ ಇಳಿಯಬೇಕು ಎಂದರು.

ಸಭೆ ನಡೆಯುವ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಶ್ರೀ ದಾಸರರವರು ಮನವಿ ಪಡೆದು ಮಾತನಾಡಿ ಜಿಲ್ಲೆಗೆ ಬೆಳೆ ಪರಿಹಾರ ಹಣ ಬಂದಿದೆ ಆದರೆ ತಾಲೂಕಾವಾರು ಹಂಚಿಕೆಯಾಗಿಲ್ಲ ರೈತರಿಂದ ರಾಷ್ಟ್ರೀಕೃತ ಬ್ಯಾಂಕುಗಳ ಖಾತೆ ನಂಬರಗಳನ್ನು ಪಡೆದು ಆದಷ್ಟು ಬೇಗನೆ ಪರಿಹಾರದ ಹಣವನ್ನು ಜಮಾ ಮಾಡುವುದಾಗಿ ಭರವಸೆ ನೀಡಿದರು.

ಕಾರ್ಮಿಕ ಮುಖಂಡರಾದ ಜಿ.ಎಂ. ಜೈನೆಖಾನ ಸಭೆಯಲ್ಲಿ ಹಾಜರಿದ್ದು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ರೈತ ಮುಖಂಡರಾದ ಅರ್ಜುನ ಜಾಧವ, ಪಂಡಿತಗೌಡ ಪಾಟೀಲ, ನಿಂಗನಗೌಡ ಪಾಟೀಲ, ಬಸೀರ ಭೈರೆಕದಾರ ಹಾಗೂ ರಾಜ್ಯ ರೈತ ಸಂಘದ, ಕಬ್ಬು ಬೆಳೆಗಾರ ಸಂಘದ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದರು.