ಮಾರ್ಚ್ 11ರಂದು ಸಹಸ್ರಾರು ಕಾರ್ಮಿಕರ ವಿಧಾನಸೌಧ ಚಲೋ

ಸಂಪುಟ: 
10
ಸಂಚಿಕೆ: 
04
date: 
Sunday, 17 January 2016

ಜನವರಿ 22ರಂದು ಪ್ರಸನ್ನಕುಮಾರ್‍ಗೆ ‘ಭಾವಪೂರ್ಣ ನುಡಿನಮನ’

ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂಗಾತಿ ಎಸ್. ಪ್ರಸನ್ನಕುಮಾರ್ ಅವರ ಅಕಾಲಿಕ ನಿಧನಕ್ಕೆ ಜನವರಿ 11 ಹಾಗೂ 12 ರಂದು ಬೆಂಗಳೂರಿನಲ್ಲಿ ನಡೆದ ಸಿಐಟಿಯು ರಾಜ್ಯ ಪದಾಧಿಕಾರಿಗಳ ಹಾಗೂ ರಾಜ್ಯ ಸಮಿತಿ ಸಭೆಯು ತೀವ್ರ ಕಂಬನಿ ಮಿಡಿಯಿತು. ಮತ್ತು ಆಗಲಿದ ನಾಯಕನಿಗೆ ಇದೇ ಜನವರಿ 22 ರಂದು ‘ಭಾವಪೂರ್ಣ ನುಡಿನಮನ’ ಸಲ್ಲಿಸಲು ನಿರ್ಧರಿಸಿದೆ.

ಬೆಂಗಳೂರಿನ ಕಬ್ಬನ್ ಪಾರ್ಕ್ ಆವರಣದಲ್ಲಿರುವ ಸೆಕ್ರಟರಿಯೇಟ್ ಕ್ಲಬ್‍ನಲಿ ಮಧ್ಯಾಹ್ನ 2 ಗಂಟೆಯಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ಸಿಐಟಿಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ತಪನ್‍ಸೇನ್, ಕಾರ್ಮಿಕ ಆಯುಕ್ತರಾದ ಡಾ. ವಿಶ್ವನಾಥ, ಕನಿಷ್ಟವೇತನ ಸಲಹಾ ಮಂಡಳಿ ಅಧ್ಯಕ್ಷೆಯಾದ ಶ್ರೀಮತಿ ಯೋಗೇಶ್ವರಿವಿಜಯ್, ಬೆಂಗಳೂರು ವಿವಿಯ ಶ್ರೀ ಆಲಂಪಲ್ಲಿ ವೆಂಕಟರಾಂ ಕಾರ್ಮಿಕ ಅಧ್ಯಯನಪೀಠದ ನಿರ್ದೇಶಕರಾದ ಡಾ: ನಾರಾಯಣ ಶೆಟ್ಟಿ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮರೆಡ್ಡಿ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷರಾದ ಮಹಾದೇವಯ್ಯ ಮಠಪತಿ ಸೇರಿದಂತೆ ಹಲವಾರು ಕೇಂದ್ರ ಕಾರ್ಮಿಕ ಸಂಘಗಳ ನಾಯಕರು, ಎಡಪಕ್ಷಗಳ ಹಿರಿಯ ಮುಖಂಡರು, ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕ ಸಂಘಗಳ ನಾಯಕರುಗಳು, ಕಾರ್ಯಕರ್ತರುಗಳು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಿಐಟಿಯು ರಾಜ್ಯ ಅಧ್ಯಕ್ಷರಾದ ವಿಜೆಕೆ ನಾಯರ್ ವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಸನ್ನ ಕುರಿತಾದ ವಿವಿಧ ಗಣ್ಯರು, ನಾಯಕರುಗಳು, ಅವರ ಒಡನಾಡಿ ಸಂಗಾತಿಗಳು ಬರೆದಿರುವ ಲೇಖನ ಹಾಗೂ ಕವನ ಹಾಗೂ ಅಭಿಪ್ರಾಯ ಮತ್ತು ವಿವಿಧ ಸಮಿತಿಗಳು ಕಳುಹಿಸಿರುವ ಶ್ರದ್ದಾಂಜಲಿ ಸಂದೇಶ ಒಳಗೊಂಡು ಕಿರುಪುಸ್ತಕವನ್ನು ಅಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಮತ್ತು ಸಿಐಟಿಯು ರಾಜ್ಯ ಸಮಿತಿ ಕಚೇರಿಯಾದ ‘ಸೂರಿ ಭವನ’ ದಲ್ಲಿ ಕಾರ್ಮಿಕ ಕಾರ್ಯಕರ್ತರು ಹಾಗೂ ನಾಯಕರ ಅಧ್ಯಯನಕ್ಕೆ ಸಹಾಯವಾಗಲು ‘ಪ್ರಸನ್ನಕುಮಾರ್ ಸ್ಮಾರಕ ಗ್ರಂಥಾಲಯ’ ಆರಂಭಿಸಲು ನಿರ್ಧರಿಸಲಾಗಿದೆ. ಇದಲ್ಲದೆ ಕಾರ್ಮಿಕ ವರ್ಗದ ಚಳವಳಿಗಾಗಿ ತಮ್ಮನ್ನು ತಮ್ಮ ಜೀವನವನ್ನು ಅರ್ಪಿಸಿಕೊಂಡಿರುವ ಪೂರ್ಣಕಾಲದ ಕಾರ್ಯಕರ್ತರಿಗೆ ಹಾಗು ಅವರ ಕುಟುಂಬದವರಿಗೆ ಸಂಕಷ್ಟಗಳು ಎದುರಾಗುವ ಸಂದರ್ಭಗಳಲ್ಲಿ ಅಂತಹ ಸಂಗಾತಿಗಳ ಕುಟುಂಬಕ್ಕೆ ಅಗತ್ಯ ನೆರವು ನೀಡಲು ಕಾಂ. ಪ್ರಸನ್ನಕುಮಾರ್ ರವರ ಹೆಸರಲ್ಲಿ ಒಂದು ನಿಧಿಯನ್ನು ಸಂಗ್ರಹಿಸಿ ಪ್ರತ್ಯೇಕವಾಗಿ ನಿರ್ವಹಿಸಲು ರಾಜ್ಯಸಮಿತಿ ತೀರ್ಮಾನ ಮಾಡಿದೆ. ಈ ನಿಧಿಯಿಂದ ಇತರೆ ಪೂರ್ಣವಧಿ ಕಾರ್ಯಕರ್ತರ ಆರೋಗ್ಯದ ಸಂಕಷ್ಠಗಳಿಗೆ ಸಹಾಯ ಮಾಡಲು ತೀರ್ಮಾನಿಸಲಾಗಿದೆ.

ಮಾರ್ಚ್ 11ರಂದು ಸಹಸ್ರಾರು ಕಾರ್ಮಿಕರ ವಿಧಾನಸೌಧ ಚಲೋ:

ಜನವರಿ 11 ಹಾಗೂ 12 ರಂದು ಬೆಂಗಳೂರಿನಲ್ಲಿ ನಡೆದ ಸಿಐಟಿಯು ರಾಜ್ಯ ಪದಾಧಿಕಾರಿಗಳ ಹಾಗೂ ರಾಜ್ಯ ಸಮಿತಿ ಸಭೆ ಹಲವು ಪ್ರಮುಖ ಹೋರಾಟಗಳಿಗೆ  ಕರೆಕೊಟ್ಟಿದೆ. ಅವುಗಳಲ್ಲಿ ಪ್ರಮುಖವಾದವು:

•    ಜನವರಿ 19 ರಂದು ಕಾರ್ಮಿಕ-ರೈತ-ಕೃಷಿಕೂಲಿಕಾರರ ಜಂಟಿ ಪ್ರತಿಭಟನೆ:   •    ಫೆಬ್ರವರಿ 5 2016 ರಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಪ್ರತಿಭಟನೆ :    •    ಮಾರ್ಚ್ 11, 2016 ರಂದು ಸಹಸ್ರಾರು ಕಾರ್ಮಿಕರ ವಿಧಾನಸೌಧ ಚಲೋ:

ಜನವರಿ 19 ರಂದು ಕಾರ್ಮಿಕ-ರೈತ-ಕೃಷಿಕೂಲಿಕಾರರ ಜಂಟಿ ಪ್ರತಿಭಟನೆ:

ಮುಂಬರುವ ದಿನಗಳಲ್ಲಿ ರೈತಕಾರ್ಮಿಕರ ಸಖ್ಯತೆಯೊಂದಿಗೆ ವಿಶಾಲ ತಳಹದಿಯ ಹೋರಾಟ ರೂಪಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲಿ ಸರ್ಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ದೇಶದಲ್ಲಿ ಮೊಟ್ಟಮೊದಲ ಸಾರ್ವತ್ರಿಕ ಮುಷ್ಕರ ನಡೆಸಿ 10 ಜನ ಹೋರಾಟಗಾರರು ಹುತಾತ್ಮರಾದ ದಿನವಾದ 19 ಜನವರಿ 2016 ರಂದು ದೇಶದ್ಯಾಂತ ರೈತ-ಕೂಲಿಕಾರರು ಹಾಗೂ ಕಾರ್ಮಿಕರ ದಿನವನ್ನಾಗಿ ಆಚರಿಸಲು ಕರೆ ನೀಡಿದೆ. ಆ ದಿನದಂದು ಸಿಐಟಿಯು, ಕರ್ನಾನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿಕೂಲಿಗಾರರ ಸಂಘಗಳು ಜಂಟಿಯಾಗಿ ಸಾಧ್ಯವಿರುವ ಎಲ್ಲಾ ಜಿಲ್ಲಾ ಕೇಂದ್ರಗಳು ಹಾಗು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಬೇಕೆಂದು ಕರೆ ನೀಡಲಾಗಿದೆ.

ಫೆಬ್ರವರಿ-5, 2016 ರಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಪ್ರತಿಭಟನೆ :

ಸೆಪ್ಟೆಂಬರ್ 2 ರಂದು ದೇಶದ ದುಡಿಯುವ ಜನರು ತೀವ್ರ ರೀತಿಯ ಪ್ರತಿರೊಧವನ್ನು ವ್ಯಕ್ತಪಡಿಸಿದ್ದಾಗ್ಯೂ ಮೋದಿ ನೇತೃತ್ವದ ಕೇಂದ್ರ ಸರಕಾರ ತನ್ನ ನವ ಉದಾರವಾದಿ ನೀತಿಗಳನ್ನು ಮತ್ತಷ್ಟು ತೀವ್ರಗತಿಯಲ್ಲಿ ಹರಿಯಬಿಡುತ್ತಿರುವ ಕ್ರಮವನ್ನು ಜನರಲ್ ಕೌನ್ಸಿಲ್ ಸಭೆ ತೀವ್ರವಾಗಿ ಖಂಡಿಸಿದೆ. ಮೋದಿ ಸರಕಾರದ ವಿರುದ್ದ ಕಾರ್ಮಿಕ ವರ್ಗ ನಡೆಸುತ್ತಿರುವ ಜಂಟಿ ಹೋರಾಟವನ್ನು ಮತ್ತಷ್ಟು ಮುಂದುವರೆಸಲು ನಿರ್ಧರಿಸಿ 2016 ಫಬ್ರವರಿ 5 ರಂದು ಕೇಂದ್ರ ಕಾರ್ಮಿಕ ಸಂಘಗಳು ಜಂಟಿಯಾಗಿ ಕರೆ ನೀಡಿರುವ ದೇಶದ್ಯಾಂತ ಜಂಟಿ ಕಾರ್ಯಚರಣೆ ಹಾಗೂ ಪ್ರಚಾರಾಂಧೋಲನವನ್ನು ಯಶಸ್ವಿಗೊಳಿಸಲು ಕರೆ ನೀಡಿದೆ. ಸೆಪ್ಟೆಂಬರ್ 2ರ ಮುಷ್ಕರದ ಬೇಡಿಕೆಗಳೊಂದಿಗೆ ಕೇಂದ್ರ ಕಾರ್ಮಿಕ ಸಂಘಟನೆಗಳು ಮುಂಬರುವ ಕೇಂದ್ರ ಬಜೆಟ್ ನಲ್ಲಿ ಪರಿಗಣಿಸಲು ಒತ್ತಾಯಿಸಿ ನೀಡಿರುವ ಸಲಹೆಗಳನ್ನು ಬಜೆಟ್ ನಲ್ಲಿ ಸೇರ್ಪಡೆ ಮಾಡಲು ಒತ್ತಾಯಿಸಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಲು ಹಾಗು ಬೇಡಿಕೆಗಳನ್ನು ಕಾರ್ಮಿಕರ ನಡುವೇ ವ್ಯಾಪಕ ಪ್ರಚಾರ ಮಾಡಲು ತೀರ್ಮಾನಿಸಲಾಗಿದೆ. ಜನವರಿ 14 ರಂದು ಬೆಂಗಳೂರಿನಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳು ಸಭೆಯೊಂದನ್ನು ನಡೆಸಿ ರಾಜ್ಯದಲ್ಲಿ ಈ ಹೋರಾಟ ಯಶಸ್ವಿಗೆ ಶ್ರಮಿಸಲು ತೀರ್ಮಾನಿಸಿವೆ.

ಮಾರ್ಚ್ 11 ರಂದು ಸಹಸ್ರಾರು ಕಾರ್ಮಿಕರ ವಿಧಾನಸೌಧ ಚಲೋ:

ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ, ಅಸಂಘಟಿತ ಹಮಾಲಿ, ಆಟೋ, ಕಟ್ಟಡ ಕಾರ್ಮಿಕರಿಗೆ ಸಮರ್ಪಕ ಕಲ್ಯಾಣ ಯೋಜನೆಗಳು ಜಾರಿಗೆ ಮತ್ತು ಪ. ಬಂಗಾಳ ಮಾದರಿಯಲ್ಲಿ ಭವಿಷ್ಯನಿದಿ ಜಾರಿ,  ಕನಿಷ್ಟ ವೇತನ 18 ಸಾವಿರ ನಿಗದಿಗಾಗಿ, ಅಂಗನವಾಡಿ, ಬಿಸಿಊಟ, ಆಶಾ ಮುಂತಾದ ಯೋಜನೆಗಳಲ್ಲಿ ಕೆಲಸಮಾಡುವ ನೌಕರರನ್ನೂ ಶಡ್ಯೂಲ್ ಪಟ್ಟಿಗೆ ಸೇರಿಸಿ ಕನಿಷ್ಟ ವೇತನ ನಿಗದಿ ಪಡಿಸಲು ಒತ್ತಾಯಿಸಿ, ಬೀಡಿ ಕಾರ್ಮಿಕರಿಗೆ ತುಟ್ಟಿಭತ್ಯೆ ಹೆಚ್ಚಳವನ್ನು ಸ್ಥಗತಿಗೊಳಿಸಿರುವ ಕಾನೂನು ಬಾಹಿರ ಆದೇಶವನ್ನು ಹಿಂದಕ್ಕೆ ಪಡೆಯಲು ಒತ್ತಾಯಿಸಿ, ತಂಬಾಕು ನಿಷೇಧದಿಂದ ಜೀವನಾಧಾರ ಕಳೆದುಕೊಂಡಿರುವ ಲಕ್ಷಾಂತರ ಬೀಡಿ ಕಾರ್ಮಿಕರಿಗೆ ಬದಲಿ ಜೀವನ ವ್ಯವಸ್ಥೆಗೆ ಒತ್ತಾಯಿಸಿ, ರಾಜ್ಯ ಸರ್ಕಾರದ ಬಜೆಟ್ ಅಧಿವೇಶನದ ಪೂರ್ವದಲ್ಲಿ ಒತತ್ಡ ಹಾಕಲು ಮಾರ್ಚ್ 11, 2016ರಂದು ವಿಧಾನ ಸೌಧ ಚಲೋ ನಡೆಸಲು ಸಿಐಟಿಯು ರಾಜ್ಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಾರ್ಮಿಕರನ್ನು ಬೃಹತ್ ಸಂಖ್ಯೆಯಲ್ಲಿ ಅಣಿನೆರಸಲು ಈಗನಿಂದಲೇ ವ್ಯಾಪಕ ಪ್ರಚಾರ ಪ್ರಕ್ಷೋಭೆಗಳನ್ನು ನಡೆಸಲು ಜಿಲ್ಲಾ ಸಮಿತಿಗಳಿಗೆ ಕರೆ ನೀಡಿದೆ.

ಸ್ಕೀಂ ವರ್ಕರ್ಸ್ ಜಂಟಿ ಹೋರಾಟ : 2016 ಫೆಬ್ರವರಿ 6, 7 ರಂದು 24 ಗಂಟೆ ಯಿಂದ 48 ಗಂಟೆಗಳ ಕಾಲ ಧರಣಿಯನ್ನು ಸಂಸತ್ ಸದಸ್ಯರ ಮನೆ ಮುಂದೆ ನಡೆಸಲು ಕರೆನೀಡಲಾಗಿದೆ.

ಮುಖ್ಯಬೇಡಿಕೆಗಳು : ಬಜೆಟ್‍ನಲ್ಲಿ ಅನುದಾನವನ್ನು ಹೆಚ್ಚಿಸುವುದು, 45 ನೇ ಐಎಲ್‍ಸಿಯ ನಿರ್ಣಯವನ್ನು ಜಾರಿಗೊಳಿಸಬೇಕು, ಎಲ್ಲಾ ಸ್ಕೀಂ ವರ್ಕರ್ಸ್‍ರನ್ನು ಖಾಯಂಗೊಳಿಸುವುದು, ಕನಿಷ್ಠ ವೇತನ ತಿಂಗಳಿಗೆ 15000 ನೀಡುವುದು, ಎಲ್ಲಾ ಸಾಮಾಜಿಕ ಸೌಲವತ್ತುಗಳನ್ನು ಮತ್ತು ಪಿಂಚಣಿಯನ್ನು ನೀಡುವುದು, ಖಾಸಗೀಕರಣಕೊಡುವುದನ್ನು ನಿಲ್ಲಿಸಿ ಸ್ಕೀಂ ವರ್ಕರ್ಸ್‍ನ್ನು ಬಲಪಡಿಸುವುದು.

ಮಾರ್ಚ್-10, 2016 ಬೃಹತ್ ವಿಧಾನಸೌಧ ಚಲೋ: ಕಾಯಕನಿದಿ üಯಡಿ ನಿವೃತ್ತಿ ಪರಿಹಾರ ಹಾಗೂ ಸಮವಸ್ತ್ರ ಸೌಲಭ್ಯಗಳ ಜಾರಿ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಸರಕಾರವೇ ಎಲ್ಲಾ ಹಮಾಲರಿಗೆ ಭವಿಷ್ಯ ನಿಧಿ ಮತ್ತು ಗುರುತಿನ ಚೀಟಿ ಸೌಲಭ್ಯಗಳ ಜಾರಿ ಸೇರಿದಂತೆ ನೆನಗುದಿಗೆ ಬಿದ್ದಿರುವ ಪ್ರಮುಖ ಬೇಡಿಕೆಗಳಿಗಾಗಿ ಒತ್ತಾಯಿಸಿ ಮಾರ್ಚ-10, 2016 ರಂದು “ಬೃಹತ್ ವಿಧಾನಸೌಧ ಚಲೋ” ನಡೆಸಲು ತಿರ್ಮಾನಿಸಲಾಗಿದೆ.

ಜನವರಿ 20ರಂದು  ಸಂಸತ್ ಸದಸ್ಯರ ಮನೆ ಮುಂದೆ ಬಿಎಸ್‍ಎನ್‍ಎಲ್ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ :

ಬಿಎಸ್‍ಎನ್‍ಎಲ್‍ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕೇಬಲ್, ಹೌಸ್‍ಕೀಪಿಂಗ್ ಹಾಗೂ ಸೆಕ್ಯೂರಿಟಿ ಕಾರ್ಮಿಕರ ಬೇಡಿಕೆಗಳನ್ನು ‘ಸಂಸತ್ತಿನಲ್ಲಿ’ ಪ್ರಸ್ತಾಪಿಸಲು ಎಲ್ಲಾ ಸಂಸತ್ ಸದಸ್ಯರನ್ನು ಆಗ್ರಹಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಂಸತ್ ಸದಸ್ಯರ ಕಚೇರಿಗಳ ಮುಂದೆ  ರಾಜ್ಯದಂತ ಜನವರಿ 20 ರಂದು ಪ್ರತಿಭಟನೆ ನಡೆಸಿ ಗಮನ ಸೆಳೆಯಲು ಬಿಎಸ್‍ಎನ್‍ಎಲ್ ನಾನ್‍ಪರ್ಮನೆಂಟ್ ವರ್ಕರ್ಸ್ ಯೂನಿಯನ್ ರಾಜ್ಯ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ 

ಬೇಡಿಕೆಗಳು...   : •    ಎಲ್ಲಾ ಕೇಬಲ್, ಹೌಸ್‍ಕೀಪಿಂಗ್ ಹಾಗೂ ಸೆಕ್ಯೂರಿಟಿ ಕಾರ್ಮಿಕರಿಗೂ ಕುಶಲ ವೇತನ ನಿಗದಿಯಾಗಬೇಕು.

•    ಕನಿಷ್ಟ ವೇತನ 18 ಸಾವಿರ ಜಾರಿಯಾಗಬೇಕು. •    ಹೊಸ ಅಧಿಸೂಚನೆ ಅನ್ವಯ ಎಲ್ಲಾ ಕಾರ್ಮಿಕರಿಗೂ ಕನಿಷ್ಟ 20 ಸಾವಿರ ಬೋನಸ್ ನೀಡಲು ಕ್ರಮವಹಿಸಬೇಕು.

•    10 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಕಾಯಂಗೊಳ್ಳಬೇಕು.

•    ಬಿ.ಎಸ್.ಎನ್.ಎಲ್ ಖಾಸಗೀಕರಣ ಕೈ ಬಿಡಬೇಕು. •    ಗುತ್ತಿಗೆ ಕಾರ್ಮಿಕರಿಗೆ ಕೆಲಸ ನಿರಾಕರಣೆ ನಿಲ್ಲಬೇಕು.

•    ಇಎಸ್‍ಐ ಹಾಗೂ ಭವಿಷ್ಯ ನಿಧಿ, ಗ್ರಾಚುಟಿ, ಹೆರಿಗೆ ರಜೆ, ವಾರದ ರಜೆ ಸೇರಿದಂತೆ ಎಲ್ಲಾ ಕಾರ್ಮಿಕ ಕಾನೂನುಗಳು ಕಡ್ಡಾಯವಾಗಿ ಜಾರಿಯಾಗಬೇಕು. ಎಲ್ಲಾ ಸರ್ಕಾರಿ- ಹಾಗೂ ಸಾರ್ವಜನಿಕ ಉದ್ಯಮಗಳಲ್ಲಿ ಬಿಎಸ್‍ಎನ್‍ಎಲ್ ಸೇವೆ ಜಾರಿ ಮಾಡಬೇಕು.
 

23 ಉದ್ದಿಮೆಗಳಿಗೆ ಕನಿಷ್ಠ ವೇತನ ಕರಡು ಅಧಿಸೂಚನೆ

ರಾಜ್ಯದ ಈ ಕೆಳಗಿನ 23 ಉದ್ದಿಮೆಗಳಿಗೆ ರಾಜ್ಯ ಸರಕಾರ ದಿನಾಂಕ : 20.11.2015 ಕನಿಷ್ಟ ವೇತನ ಪರಿಷ್ಕರಿಸಿ ಕರಡು ಅಧಿ ಸೂಚನೆಯನ್ನು ಹೊರಡಿಸಿದೆ.

1) ಗೃಹ ಕೃತ್ಯ ಕಾರ್ಮಿಕರು 2) ಪ್ರೊಕ್ಯೂರ್‍ಮೆಂಟ್, ಪ್ರೊಸೆಸಿಂಗ್ ಅಂಡ್ ಡಿಸ್ಟ್ರಿಬ್ಯೂಷನ್ ಆಪ್ ಮಿಲ್ಕ್ 3) ಮದ್ಯ ತಯಾರಿಕೆ 4)  ಪ್ಲಾಸ್ಟಿಕ್, ಪಾಲಿ ಪ್ಲಾಸ್ಟಿಕ್ ರಬ್ಬರ್ ಮತ್ತು ಪಿವಿಸಿ ಪೈಪ್ಸ್ ಮ್ಯಾನ್ಯುಫ್ಯಾಕ್ಟರಿಂಗ್ 5) ಸ್ಪನ್ ಪೈಪ್, ಕಾಂಕ್ರೀಟ್ ಪೈಪ್, ಸ್ಯಾನಿಟರಿ ಫಿಟಿಂಗ್ಸ್ ಪಿ.ಸಿ.ಸಿ ಆರ್.ಸಿ.ಎಸ್ ಪೋಲ್ಸ್ ಮತ್ತು ಆರ್.ಸಿ.ಸಿ ಪೈಪ್ಸ್ ಮ್ಯಾನ್ಯುಫ್ಯಾಕ್ಟರಿಂಗ್ 6) ಪಬ್ಲಿಕ್ ಮೋಟಾರ್ ಟ್ರಾನ್ಸ್ ಪೋರ್ಟ್ 7) ರಸ್ತೆಗಳ ನಿರ್ಮಾಣ ಅಥವಾ ನಿರ್ವಹಣಾ ಮತ್ತು ಕಟ್ಟಡಗಳ ನಿರ್ಮಾಣದಲ್ಲಿ 8) ಗ್ಲಾಸ್ ಅಂಡ್ ಗ್ಲಾಸ್‍ವೇರ್ 9) ಆರ್ಯುವೇದಿಕ್ ಮತ್ತು ಅಲೋಪಥಿಕ್ ಔಷಧಿ ತಯಾರಿಕೆ 10) ಪ್ರೈವೇಟ್ ಫೈನಾನ್ಸ್ ಕಾರ್ಪೋರೇಷನ್ ಮತ್ತು ಚಿಟ್‍ಫಂಟ್ 11) ಎಲೆಕ್ಟ್ರಾನಿಕ್ಸ್ 12) ಲಾಂಡ್ರಿ 13) ಸ್ವೀಲ್, ಅಲ್ಮೇರಾ, ಟೇಬಲ್, ಕುರ್ಚಿ ಇತ್ಯಾದಿ ಪೀಠೋಪಕರಣಗಳ ತಯಾರಿಕೆ 14) ಹೋಟೆಲ್ 15) ಕ್ಲಬ್ 16) ಎಲೆಕ್ಟ್ರೋ ಫ್ಲೇಟಿಂಗ್ 17) ಟಿಂಬರ್ ಡಿಪೋ 18) ಸಿನಿಮ 19) ಮಿನಿ ಸಿಮೆಂಟ್ ಪ್ಲಾಂಟ್ 20) ಎರೇಟೆಡ್ ವಾಟರ್ ಮ್ಯಾನ್ಯುಫ್ಯಾಕ್ಟರಿಂಗ್ 21) ವೃತಿಪರ ಔಷಧ, ಗ್ರಾಹಕ ವಸ್ತುಗಳ ಮತ್ತು ಸೇವೆಗಳ ಮಾರಾಟ ಪ್ರತಿನಿಧಿ 22) ಆಸ್ಪತ್ರೆ ಮತ್ತು ನರ್ಸಿಂಗ್ ಹೋಂ 23) ಆಹಾರ ಸಂಸ್ಕರಣೆ, ಆಹಾರ ಪದಾರ್ಥಗಳ ಪ್ಯಾಕ್ ಮಾಡುವುದು, ಕಾಫಿ ಮತ್ತು ಸಾಂಬಾರ್ ಪದಾರ್ಥಗಳನ್ನು ಪ್ಯಾಕ್ ಮಾಡುವುದು.
 ಎರಡು ತಿಂಗಳ ನಿಗದಿತ ಅವಧಿಯೊಳಗೆ ಈ ಕರಡು ಅಧಿಸೂಚನೆಗಳಿಗೆ ಸಂಬಂಧಿಸಿದ ಸಂಘಗಳು ಸೂಕ್ತ ಆಕ್ಷೇಪಣೆಗಳನ್ನು ಸಲ್ಲಿಸಬೇಕು. ಆಕ್ಷೇಪಣೆಗಳನ್ನು ಸಲ್ಲಿಸಲು ರಾಜ್ಯ ಕೇಂದ್ರವನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯಬಹುದು. ಈಗಾಗಲೇ ನಾವು ಒತ್ತಾಯಿಸುತ್ತಿರುವ ಅಕುಶಲ ಕಾರ್ಮಿಕರಿಗೆ ರೂ. 18,000/- ಕನಿಷ್ಟವೇತನ ನಿಗದಿ ಪಡಿಸಲು ಒತ್ತಾಯಿಸಬೇಕು. ಎಂದು ಸಿಐಟಿಯು ರಾಜ್ಯ ಸಮಿತಿ ಕರೆ ನೀಡಿದೆ.

ಬೋನಸ್ ಪಾವತಿ ಕಾಯ್ದೆಗೆ ತಿದ್ದುಪಡಿ

ಬೋನಸ್ ಪಾವತಿ ಕಾಯ್ದೆ-1965ಕ್ಕೆ ಕೇಂದ್ರ ಸರ್ಕಾರ 31.12.2015 ರಲ್ಲಿ ತಿದ್ದುಪಡಿ ಮಾಡಿದೆ. ಈ ತಿದ್ದುಪಡಿಯು ದಿನಾಂಕ 1.4.2014 ರಿಂದ ಪೂರ್ವನ್ವಯವಾಗಿ ಜಾರಿಗೆ ಬರುತ್ತದೆ. ಇದು ಕಾರ್ಮಿಕ ಚಳವಳಿಯ ನಿರಂತರ ಹೋರಾಟಕ್ಕೆ ದೊರೆತಿರುವ ಅಲ್ಪ ಪ್ರಮಾಣದ ಜಯವಾಗಿದೆ. ಬೋನಸ್ ಪಡೆಯಲು ಅರ್ಹತೆ: ಈ ತಿದ್ದುಪಡಿಯ ಆಧಾರದಲ್ಲಿ ಮಾಸಿಕ 21,000/- ರೂವರೆಗೂ ಮೂಲ ವೇತನ ಹಾಗು ತುಟ್ಟಿಭತ್ಯೆಯನ್ನು ಗಳಿಸುವ ಕಾರ್ಮಿಕರು ಬೋನಸ್ ಪಡೆಯಲು ಅರ್ಹರಾಗುತ್ತಾರೆ.

ಕನಿಷ್ಠ ಹಾಗು ಗರಿಷ್ಠ ಬೋನಸ್ : ಈ ಹೊಸ ತಿದ್ದುಪಡಿಯ ಆಧಾರದಲ್ಲಿ ಕಾರ್ಮಿಕರಿಗೆ “ಕನಿಷ್ಟ 7000/- ರೂ ಬೋನಸ್ ಅಥವಾ ಕನಿಷ್ಠ ವೇತನ ಕಾಯಿದೆ ಅಡಿಯಲ್ಲಿ ಸಂಬಂಧಿತ ಕೈಗಾರಿಕೆಗೆ ನಿಗದಿ ಪಡಿಸಲಾಗಿರುವ ವೇತನ, ಇದರಲ್ಲಿ ಯಾವುದು ಹೆಚ್ಚಾಗಿರುವುದೋ ಆ ಮೊತ್ತ” ಕನಿಷ್ಠ ಬೋನಸ್ ಆಗುತ್ತದೆ. ಈ ಮೊತ್ತವನ್ನು 8.33% ರಷ್ಟು ಬೋನಸ್ ಎಂದು ಪರಿಗಣಿಸಬೇಕು.ಇದೇ ಆಧಾರಲ್ಲಿ ಗರಿಷ್ಠ 20% ಬೋನಸ್‍ನ್ನು ಲೆಕ್ಕ ಹಾಕಬೇಕು. ಅಂದರೆ ಕನಿಷ್ಟ ಬೋನಸ್ ಮೊತ್ತವನ್ನು 2.40ರಿಂದ ಗುಣಿಸಿದರೆ ಬರುವ ಮೊತ್ತ ಗರಿಷ್ಠ (ಶೇ20)ಬೋನಸ್ ಆಗುತ್ತದೆ. ಕಾರ್ಮಿಕರು ಬೋನಸ್ ನೀಡುವ ವರ್ಷದಲ್ಲಿ ಗಳಿಸಿದ ವೇತನಕ್ಕೆ ಅನುಗುಣವಾಗಿ ಈ ಗರಿಷ್ಠ ಹಾಗು ಕನಿಷ್ಠ ಬೋನಸ್‍ನ್ನು ಲೆಕ್ಕ ಹಾಕಬಹುದಾಗಿದೆ.

ಈ ತಿದ್ದುಪಡಿಯು ದಿನಾಂಕ 1.4.2014 ರಿಂದ ಜಾರಿಗೆ ಬಂದಿರುವ ಕಾರಣ, 2014-15ರ ಸಾಲಿನ ಬೋನಸ್‍ನ್ನು 2015ನೇ ವರ್ಷದಲ್ಲಿ ಪಾವತಿ ಮಾಡಬೇಕಾಗುತ್ತದೆ. ಕಾರ್ಮಿಕರಿಗೆ ಈ ಹೊಸ ಪ್ರಮಾಣದಲ್ಲಿ ಲೆಕ್ಕಹಾಕಿ ಈಗಾಗಲೇ ನೀಡಲಾಗಿರುವ ಬೋನಸ್ ಕಡಿಮೆ ಆಗಿದ್ದಲ್ಲಿ ಬಾಕಿ ಪಾವತಿಯನ್ನು ಮಾಲೀಕರು ಮಾಡಬೇಕು.

ಬೋನಸ್ ಕಾಯ್ದೆಯಲ್ಲಿನ ಎಲ್ಲಾ  ಮಿತಿಗಳನ್ನು  ರದ್ದುಗೊಳಿಸಿ ಎಲ್ಲಾ ಕಾರ್ಮಿಕರಿಗೂ ಬೋನಸ್ ಸಿಗುವಂತೆ ಕಾನೂನುನಿಗೆ ತಿದ್ದುಪಡಿ ಮಾಡಬೇಕೆಂದು ಕಾರ್ಮಿಕ ಸಂಘಗಳ ಒತ್ತಾಯವಾಗಿದೆ. ಆದರೆ ಕೇಂದ್ರ ಸರ್ಕಾರ ಕೇವಲ ಅರ್ಹತೆಯ ವೇತನ ಮಿತಿಯನ್ನು 10,000 ರಿಂದ 21,000ಕ್ಕೂ ಏರಿಸಿದೆ ಹಾಗು ಕನಿಷ್ಠ ಬೋನಸ್ ಮಿತಿಯನ್ನು ರೂ.3,500/- ರಿಂದ 7,000/- ಏರಿಸಿದೆ.

ಕೆಲವು ಕೈಗಾರಿಕೆಗಳಲ್ಲಿ ಈಗ ನಿಗದಿಯಾಗಿರುವ ಕನಿಷ್ಠ ವೇತನ ರೂ.7000 ಕ್ಕಿಂತಲೂ ಹೆಚ್ಚಾಗಿದೆ. ಅಂತಹ ಕೈಗಾರಿಕೆಯಲ್ಲಿ ದುಡಿಯುವ ಕಾರ್ಮಿಕರಿಗೆ ಈ ತಿದ್ದುಪಡಿ ಸ್ವಲ್ಪ ಮಟ್ಟಿಗೆ ಅನುಕೂಲವಾಗಲಿದೆ.
 

 

- ಕೆ. ಮಹಾಂತೇಶ್