ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರ ಪ್ರತಿಭಟನೆ

ಸಂಪುಟ: 
10
ಸಂಚಿಕೆ: 
04
Sunday, 17 January 2016

ಅತಿಥಿ ಉಪನ್ಯಾಸಕರ ಸೇವೆಯನ್ನು ವಿಲೀನಗೊಳಿಸಬೇಕು. ಸೇವೆಯನ್ನು ವಿಲೀನಗೊಳಿಸುವ ಸಂಬಂಧ ಕಾನೂನು ತೊಡಕುಗಳ ನಿವಾರಣೆಗಾಗಿ ಹಿರಿಯ ಸಾಹಿತಿಗಳಾದ ನಾಡೋಜ ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಒಳಗೊಂಡ ತಜ್ಞರ ಸಮಿತಿ ರಚಿಸಬೇಕು.

ವಿಲೀನಗೊಳ್ಳುವವರೆಗೆ ವೇತನವನ್ನು ಮಾಸಿಕ ರೂ. 25 ಸಾವಿರ ರೂಪಾಯಿಗಳಿಗೆ ಹೆಚ್ಚಿಸಿ, ವರ್ಷದ 12 ತಿಂಗಳೂ ನೀಡಬೇಕು. ಸೇವಾ ಹಿರಿತನ ಮತ್ತು ವಯೋಮಿತಿ ಆಧಾರದಲ್ಲಿ ನೇಮಕಾತಿ ಮಾಡಬೇಕು. ಮಹಿಳಾ ಉಪನ್ಯಾಸಕರಿಗೆ ವೇತನ ಸಹಿತ 3 ತಿಂಗಳ ಹೆರಿಗೆ ರಜೆ ನೀಡಬೇಕು. ಎಂದು ಆಗ್ರಹಿಸಿ ಜನವರಿ 13ರಂದು ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿ.ವೈ.ಎಫ್.ಐ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಅತಿಥಿ ಉಪನ್ಯಾಸಕರ ಪದವಿ ತರಗತಿ ಬಹಿಷ್ಕಾರ ಮತ್ತು ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಬೇಕೆಂದಿರುವ ಉನ್ನತ ಶಿಕ್ಷಣ ಸಚಿವರಾದ ಟಿ.ಬಿ.ಜಯಚಂದ್ರರವರು, ಮೊದಲು ಅತಿಥಿ ಉಪನ್ಯಾಸಕ ಮುಖಂಡರ ಜೊತೆ ಮಾತುಕತೆಗೆ ತಕ್ಷಣದಲ್ಲೇ ದಿನಾಂಕ ನಿಗದಿ ಮಾಡಿ ಮಾತುಕತೆಗೆ ಆಹ್ವಾನಿಸಬೇಕು. ಆನಂತರ ತರಗತಿ ಬಹಿಷ್ಕಾರ ಮತ್ತು ಪ್ರತಿಭಟನೆ ಹಿಂದಕ್ಕೆ ಪಡೆಯುವ ಬಗ್ಗೆ ತೀರ್ಮಾನಿಸುತ್ತೇವೆಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಈ ಮೂಲಕ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದೆ.

ಉನ್ನತ ಶಿಕ್ಷಣ ಸಚಿವರ ಆಪ್ತಕಾರ್ಯದರ್ಶಿರವರು ಒಳಗೊಂಡ ಸಭೆ ನಡೆಸುವ ಬಗ್ಗೆ ಯಾವುದೇ ಪ್ರಕ್ರಿಯೆಗಳು ನಡೆಯದೆ, ಈಗ ದೀಢಿರನೆ ಸಹಾಯಕ ಪ್ರಾಧ್ಯಪಕರ ಹುದ್ದೆಯ ಸ್ಫರ್ಧಾತ್ಮಾಕ ಪರೀಕ್ಷೆಯ ಕರಡು ಪ್ರಸ್ತಾವ ವೇಳಾ ಪಟ್ಟಿ ಪ್ರಕಟಿಸಿಲಾಗಿದೆ. ಸದ್ಯದಲ್ಲೇ ಸ್ವರ್ಧಾತ್ಮಕ ಪರೀಕ್ಷೆ ನಡೆಸಿ ನೂತನವಾಗಿ ಖಾಯಂ ಉಪನ್ಯಾಸಕರನ್ನು ನೇಮಿಸಿಕೊಳ್ಳುವುದರಿಂದ ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಂಡು ಬೀದಿಪಾಲಾಗಲಿದ್ದಾರೆ. ಆದ್ದರಿಂದ ಮತ್ತೆ ಪ್ರತಿಭಟನೆ ನಡೆಸಲು ಅತಿಥಿ ಉಪನ್ಯಾಸಕರು ತೀರ್ಮಾನಿಸಿದ್ದರು.

ಬೆಂಗಳೂರು ನಗರ-ಗ್ರಾಮಂತರ, ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ದಾವಣಗೆರೆ, ಚಿತ್ರದುರ್ಗ, ಬಿಜಾಪುರ, ಬೀದರ್, ಬಾಗಲಕೋಟೆ, ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಕಲ್ಬುರ್ಗಿ, ತುಮಕೂರು, ಹಾವೇರಿ, ಹುಬ್ಬಳಿ-ಧಾರವಾಡ ಸೇರಿದಂತೆ ಬಹತೇಕ ಎಲ್ಲಾ ಜಿಲ್ಲೆಗಳಲ್ಲಿ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳು ಮತ್ತು ತಹಸಿಲ್ದಾರ್ ರವರಿಗೆ ಮನವಿ ಪತ್ರಗಳನ್ನು ತಲುಪಿಸಿದ್ದಾರೆ.