ಮಾಲ್ದ ಹಿಂಸಾಚಾರ-ಜನತೆಯ ಆಕ್ರೋಶವನ್ನು ಲಾಭಕ್ಕೆ ಬಳಸುವ ಪ್ರಯತ್ನ: ಬೃಂದಾ ಕಾರಟ್

ಸಂಪುಟ: 
10
ಸಂಚಿಕೆ: 
04
Sunday, 17 January 2016

ಕಳೆದ ವಾರ ಪಶ್ಚಿಮ ಬಂಗಾಲದ ಮಾಲ್ದ ಜಿಲ್ಲೆಯ ಕಲಿಯಾ ಚಾಕ್‍ದಲ್ಲಿ ನಡೆದ ಹಿಂಸಾಚಾರ ಇಡೀ ದೇಶದ ಗಮನ ಸೆಳೆದಿದೆ. ಅಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಜನತೆಯ ಆಕ್ರೋಶವನ್ನು ಕೊಮುವಾದಿ ಭಾವನೆಗಳತ್ತ ತಿರುಗಿಸಿ ಚುನಾವಣಾ ಲಾಭ ಗಿಟ್ಟಿಸುವ ಟಿಎಂಸಿ ಮತ್ತು ಆರೆಸ್ಸೆಸ್ ಪ್ರಯತ್ನಗಳ ಪರಿಣಾಮ ಇದು ಎಂದು ಸಿಪಿಐ(ಎಂ) ಹಿರಿಯ ಮುಖಂಡರಾದ ಬೃಂದಾ ಕಾರಟ್ ಅಭಿಪ್ರಾಯ ಪಟ್ಟಿದ್ದಾರೆ.

ಪಶ್ಚಿಮ ಬಂಗಾಲದ ಮುಖ್ಯಮಂತ್ರಿಗಳು ಇದು ಕೋಮುಗಲಭೆಯಲ್ಲ ಎಂದಿದ್ದಾರೆ. ಮತ್ತಿನ್ನೇನು ಎಂದೇನೂ ಹೇಳಿಲ್ಲ. ಈ ಬಗ್ಗೆ ಸಂದರ್ಶಕರೊಬ್ಬರು ಬೃಂದಾ ಕಾರಟ್ ಅವರನ್ನು ಕೇಳಿದಾಗ “ಈ ಘಟನೆಯ ಗುರಿ ಕೋಮುವಾದಿ ಎಂದು ನನಗನ್ನಿಸುತ್ತಿಲ್ಲ. ಆದರೆ ಇದು ಭುಗಿಲೇಳಲು ಇರುವುದು ಕೋಮುವಾದಿ ಕಾರಣಗಳೇ. ಸಂಘ ಪರಿವಾರದ ಒಬ್ಬ ಸದಸ್ಯನ ಉಗ್ರ ಕೋಮುವಾದಿ ಭಾಷಣಕ್ಕೆ ಕೆಲವು ಮುಸ್ಲಿಮ್ ಮೂಲಭೂತವಾದಿಗಳ ಪ್ರತಿಕ್ರಿಯೆಯೂ ಕೋಮುವಾದಿ ಸ್ವರೂಪದ್ದೇ ಆಗಿತ್ತು. ಇದಕ್ಕಿಂತಲೂ ಹೆಚ್ಚಿನ ಆಕ್ಷೇಪಕಾರಿ ಸಂಗತಿಯೆಂದರೆ ತೃಣಮೂಲ ಕಾಂಗ್ರೆಸಿನ ಪಾತ್ರ. ಅದಕ್ಕೆ ಪಶ್ಚಿಮ ಬಂಗಾಲದಲ್ಲಿ ಧ್ರುವೀಕರಣದಿಂದ ಪ್ರಯೋಜನ ಪಡೆಯಬೇಕೆಂದಿದೆ" ಎಂದು ಅವರು ಹೇಳಿದ್ದಾರೆ.

ಟಿಎಂಸಿ ಮತ್ತು ಬಿಜೆಪಿ ಎರಡಕ್ಕೂ ಪಶ್ಚಿಮ ಬಂಗಾಲದ ಹಿತಗಳ ಬಗ್ಗೆ ಏನೇನೂ ಆಸಕ್ತಿಯಿಲ್ಲ. ಟಿಎಂಸಿ ಮುಸ್ಲಿಮ್ ಸಮುದಾಯದ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ, ಬದಲಾಗಿ ಅದು ಮೂಲಭೂತವಾದಿಗಳನ್ನು ತುಷ್ಟೀಕರಿಸಲು ಪ್ರಯತ್ನಿಸುತ್ತಿದೆ. ದುರದೃಷ್ಟವಶಾತ್ ಎರಡೂ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಭಾವನೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಬೃಂದಾ ಕಾರಟ್ ಖೇದ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಬಂಗಾಲ ಕೋಮು ಸೌಹಾರ್ದದ ಸಂಕೇತವಾಗಿತ್ತು. ಅದನ್ನು ಟಿಎಂಸಿ ನಾಶ ಪಡಿಸಿದೆ. ಮಾಲ್ದದಲ್ಲಿ ನಡೆದಿರುವುದು ಚುನಾವಣೆಗಳನ್ನು ಗಮನ ದಲ್ಲಿಟ್ಟುಕೊಂಡೇ. ಟಿಎಂಸಿ ಮತ್ತು ಆರೆಸ್ಸೆಸ್ ಎರಡೂ ಕೋಮುವಾದಿ ಶಕ್ತಿಗಳನ್ನು ಚುನಾವಣಾ ಲಾಭಕ್ಕಾಗಿ ಪ್ರೋತ್ಸಾಹಿಸಲು ದೃಢ ನಿರ್ಧಾರ ಮಾಡಿದಂತಿದೆ ಎಂದು ಬೃಂದಾ ಕಾರಟ್ ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತ ಹೇಳಿದರು.

ಬಿಹಾರದ ಚುನಾವಣೆಗಳಲ್ಲಿ ಕೋಮುಜ್ವಾಲೆಯನ್ನು ಹಚ್ಚುವ ಬಿಜೆಪಿ ಪ್ರಯತ್ನವನ್ನು ಅಲ್ಲಿನ ಮತದಾರರು ತಿರಸ್ಕರಿಸಿದ್ದಾರೆ, ಪಶ್ಚಿಮ ಬಂಗಾಲದ ಮತದಾರರೂ ಸಂಕುಚಿತ ರಾPಜಕಾರಣವನ್ನು ತಿರಸ್ಕರಿಸುವರೇ? ಖಂಡಿತಾ, ಬಂಗಾಲದ ಜನತೆಗೆ ಅದು ನಮ್ಮ ಮನವಿ ಎಂದು ಬೃಂದಾ ಕಾರಟ್ ಹೇಳಿದ್ದಾರೆ.