ಎಸ್ ಸಿ/ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯಡಿ ತಕ್ಷಣವೇ ಬಂಧಿಸಿ :ಡಿಎಸ್‍ಎಂಎಂ

Tuesday, 19 January 2016

ದಲಿತ ಶೋಷಣ ಮುಕ್ತಿ ಮಂಚ್ (ಡಿಎಸ್ ಎಂಎಂ) ಕೂಡ ಇದೊಂದು ಅತ್ಯಂತ ಆಘಾತಕಾರಿ ಮತ್ತು ದುಃಖದ ಘಟನೆ ಎಂದು ಹೇಳಿದೆ. ವೆಮುಲ ರೋಹಿತ್‍ನ ಆತ್ಮಹತ್ಯೆಗೆ ಉಪಕುಲಪತಿ ಮತ್ತು ಬಿಜೆಪಿ ಕೇಂದ್ರ ಸರಕಾರ ಹೊಣೆ ಎಂದು ಹೇಳಿರುವ ಅದು ಉಪಕುಪತಿಯನ್ನು ಎಸ್ ಸಿ/ಎಸ್ ಟಿ ಅತ್ಯಾಚಾರಗಳ ತಡೆ ಕಾಯ್ದೆಯ ಅಡಿಯಲ್ಲಿ ತಕ್ಷಣವೇ ಬಂಧಿಸಬೇಕು ಎಂದು ಅಗ್ರಹಿಸಿದೆ.

ಈ ವಿಶ್ವವಿದ್ಯಾಲಯದ ಹಿಂದಿನ ಉಪಕುಲಪತಿ ಆರ್.ಬಿ.ಶರ್ಮ ಇದೇ ವಿದ್ಯಾರ್ಥಿಗಳನ್ನು ಈ ಹಿಂದೆ ಅಮಾನತು ಮಾಡಿದ ನಿರ್ಣಯ ವಿಶ್ವವಿದ್ಯಾಲಯದ ಶಿಸ್ತುಕ್ರಮದ ಮಂಡಳಿಯ ನಿರ್ಣಯಕ್ಕೆ ಅನುಗುಣವಾಗಿ ಇಲ್ಲ ಎಂದು ಕಂಡು ಬಂದ ಮೇಲೆ ಆ ಕ್ರಮವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದರು. ಆದರೆ ಕೇಂದ್ರ ಸಂಪನ್ಮೂಲ ಮಂತ್ರಿ ಮತ್ತು ಈ ರಾಜ್ಯಕ್ಕೆ ಸೇರಿದ ಕೇಂದ್ರ ಮಂತ್ರಿಯೊಬ್ಬರ ಹಸ್ತಕ್ಷೇಪದಿಂದಾಗಿ ಹಿಂದಿನ ಉಪಕುಲಪತಿಗಳ ನಿರ್ಣಯವನ್ನು  ಮೀರಿ ಈ ವಿದ್ಯಾರ್ಥಿಗಳನ್ನು ಹಾಸ್ಟೆಲ್ ನಿಂದ ಹೊರಹಾಕಿದ್ದು ಹಲವು ಸಂದೇಹಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಡಿಎಸ್ ಎಂಎಂ ಅಭಿಪ್ರಾಯ ಪಟ್ಟಿದೆ.

ಶಿಕ್ಷಣದ ಮೂಲಕ ದಲಿತ ವಿದ್ಯಾರ್ಥಿಗಳ ಮುನ್ನಡೆಯನ್ನು ತಡೆಯಲು ಸರಕಾರ ಬೇಕೆಂದೇ ಒಂದು ಪ್ರಯತ್ನ ನಡೆಸಿದೆ ಎಂದು ಹೇಳಿರುವ ಡಿಎಸ್ ಎಂಎಂ, ದಲಿತ ವಿದ್ಯಾರ್ಥಿಗಳನ್ನು ಬೇಕೆಂದೇ  ಅಮಾನತು ಮಾಡಿರುವ, ವಿವಿ ಆವರಣದಲ್ಲಿ ಅವರ ಚಲನವಲನದ ಮೇಲೆ ಮಿತಿ ಹಾಕಿರುವ, ಹಾಸ್ಟೆಲುಗಳಿಗೆ ಪ್ರವೇಶಿಸದಂತೆ, ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿಷೇಧ ಹಾಕಿರುವ ಪ್ರಯತ್ನಗಳೆಲ್ಲ ಇಂತಹ ಪ್ರಯತ್ನವನ್ನೇ ಸೂಚಿಸುತ್ತವೆ.

ಉಪಕುಲಪತಿಯನ್ನು ಎಸ್ ಸಿ/ಎಸ್ ಟಿ ಅತ್ಯಾಚಾರ ತಡೆ ಕಾಯ್ದೆಯ ಅಡಿಯಲ್ಲಿ ಕೂಡಲೇ ಬಂಧಿಸಬೇಕು, ದಲಿತ ವಿದ್ಯಾರ್ಥಿಗಳ ಮೇಲೆ ಹೇರಿರುವ ಅಮಾನತನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಡಿಎಸ್ ಎಂಎಂ ಆಗ್ರಹಿಸಿದೆ. ಈ ದಲಿತ ವಿದ್ಯಾರ್ಥಿಗಳ ಅಮಾನತು ಮತ್ತು ರೋಹಿತ್ ನ ಆತ್ಮಹತ್ಯೆಯ ಬಗ್ಗೆ ಆಮೂಲಾಗ್ರ ತನಿಖೆ ನಡೆಸಬೇಕು, ತನಿಖೆಯಿಂದ ಅಪರಾಧಿಗಳನ್ನೆಲ್ಲ ಗುರುತಿಸಿ ಶಿಕ್ಷಿಸಬೇಕು ಎಂದು ಆಗ್ರಹಿಸಿರುವ ಡಿಎಸ್ ಎಂಎಂ, ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿ ಪ್ರತಿಭಟಿಸುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಸೌಹಾರ್ದ ವ್ಯಕ್ತಪಡಿಸಿದೆ.