ವಿವಿಯಲ್ಲಿ ದಲಿತ ಪಿಹೆಚ್‍ಡಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಬಹಿಷ್ಕಾರ

ಸಂಪುಟ: 
10
ಸಂಚಿಕೆ: 
04
Sunday, 17 January 2016

ಕಾನೂನುಬಾಹಿರ ಕ್ರಮ ಎಂದು ಡಿಎಸ್‍ಎಂಎಂ ಬಲವಾದ ಖಂಡನೆ : ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಐವರು  ದಲಿತ ಪಿಹೆಚ್‍ಡಿ ವಿದ್ಯಾರ್ಥಿಗಳನ್ನು ಅಂಬೇಡ್ಕರ್ ವಿದ್ಯಾರ್ಥಿ ಸಂಘ(ಎಎಸ್‍ಎ) ಮತ್ತು ಎಬಿವಿಪಿ ನಡುವಿನ ವಿವಾದದ ನೆಪವೊಡ್ಡಿ ವಿವಿಯಿಂದ ಹೊರಹಾಕಲಾಗಿದೆ. ಇದನ್ನು ದಲಿತ ಶೋಷಿತ ಮುಕ್ತಿ ಮಂಚ್(ಡಿಎಸ್‍ಎಸ್‍ಎಂಎಂ) ಬಲವಾಗಿ ಖಂಡಿಸಿದೆ.

ಪ್ರಶಾಂತ್, ರೋಹಿತ್, ಶೇಷಯ್ಯ, ವಿಜಯ್ ಮತ್ತು ಸುಂಕಣ್ಣ ಈ ಐದು ಪಿಹೆಚ್‍ಡಿ ವಿದ್ಯಾರ್ಥಿಗಳನ್ನು ವಿವಿಯ ಅಧಿಕಾರಿಗಳು ತಕ್ಷಣವೇ ತಮ್ಮ ಹಾಸ್ಟೆಲ್ ಕೊಠಡಿಗಳನ್ನು ಖಾಲಿ ಮಾಡಬೇಕು ಎಂದು ಆದೇಶಿಸಿದ್ದಾರೆ. ಅವರನ್ನು ಖಾಲಿ ಮಾಡಿಸಿ ಆ ಕೊಠಡಿಗಳಿಗೆ ಬೀಗ ಹಾಕಿದ್ದಾರೆ. ಇದನ್ನು ಬಿಜೆಪಿ ಮುಖಂಡರು ಮತ್ತು ಕೇಂದ್ರದ ಮಂತ್ರಿಗಳ ಒತ್ತಡದಿಂದ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಈ ವಿದ್ಯಾರ್ಥಿಗಳೀಗ ವಿವಿಯ ಆವರಣದಲ್ಲಿ ಹಾಕಿರುವ ಟಾರ್ಪಾಲೀನ್ ಸೂರಿನ ಅಡಿಯಲ್ಲಿ ತೀವ್ರ ಚಳಿಯನ್ನು ಸಹಿಸಿಕೊಂಡು ಇದ್ದಾರೆ. ಅವರೊಂದಿಗೆ ಬೇರೆ ವಿದ್ಯಾರ್ಥಿಗಳು ಮಾತಾಡದ ಹಾಗೆ ‘ಸಾಮಾಜಿಕ ಬಹಿಷ್ಕಾರ’ ಹಾಕಲಾಗಿದೆ. ಅವರು ಅಲ್ಲಿನ ಚುನಾವಣೆಗಳಲ್ಲಿ ಸ್ಪರ್ಧಿಸಬಾರದು, ಯಾವುದೇ ಸಾರ್ವಜನಿಕ ಚಟುವಟಿಕೆ ನಡೆಸಬಾರದು ಎಂದು ತಾಕೀತು ಮಾಡಲಾಗಿದೆ. ಇದು ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ ಎಂದು ಡಿಎಸ್‍ಎಂಎಂ ಟೀಕಿಸಿದೆ.

ವಿ.ಶ್ರೀನಿವಾಸ ರಾವ್ ಅವರ ನೇತೃತ್ವದ ಡಿಎಸ್‍ಎಂಎಂ ನಿಯೋಗವೊಂದು ಈ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರಿಗೆ ತಮ್ಮ ಸೌಹಾರ್ದವನ್ನು ವ್ಯಕ್ತಪಡಿಸಿದೆ. ನಂತರ ಶ್ರೀನಿವಾಸ ರಾವ್ ಮಾಧ್ಯಮಗಳೊಂದಿಗೆ ಮಾತಾಡುತ್ತ ದಲಿತ ವಿದ್ಯಾರ್ಥಿಗಳ ವಿರುದ್ಧದ ಈ ಕ್ರಮಗಳನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು, ಇಂತಹ ಕಾನೂನುಬಾಹಿರ ಕ್ರಮಕೈಗೊಂಡಿರುವ  ಉಪಕುಲಪತಿ ಮತ್ತು ಇತರ ವಿವಿ ಅಧಿಕಾರಗಳ ವಿರುದ್ಧ, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಉಪಕುಲಪತಿ ಕೋಮುವಾದಿ ಮತ್ತು ಮನುವಾದಿಗಳೊಂದಿಗೆ ಬಲವಾದ ಸಂಪರ್ಕ ಇರುವವರು ಎಂದು ಅವರು ಹೇಳಿದ್ದಾರೆ.

ಈ ನಡುವೆ ಇಂತಹ ಹೀನ ಸಾಮಾಜಿಕ ಬಹಿಸ್ಕಾರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯ ತರಲು ಎಸ್‍ಎಫ್‍ಐ ಸೇರಿದಂತೆ ಎಲ್ಲ ಪ್ರಜಾಪ್ರಭುತ್ವವಾದಿ ವಿದ್ಯಾರ್ಥಿ ಸಂಘಗಳ ಜಂಟಿ ಕ್ರಿಯಾಸಮಿತಿ ಈಗ ರಚನೆಗೊಂಡಿದೆ.