ಕೇಸರಿ ಪಡೆ ಶಾಮೀಲು: ದಲಿತ ವಿದ್ಯಾರ್ಥಿ ಬಲಿ

Monday, 18 January 2016

ಕೇಸರಿ ಪಡೆಗಳೊಂದಿಗೆ ಶಾಮೀಲಾದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಕ್ರೂರ, ಕಾನೂನು ಬಾಹಿರ ಕ್ರಮಕ್ಕೆ ದಲಿತ ಸಂಶೋಧನಾ ವಿದ್ಯಾರ್ಥಿಯ ಬಲಿಯಾಗಿದ್ದಾನೆ.

ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಅಧಿಕಾರಿಗಳು ಅಂಬೇಡ್ಕರ್ ವಿದ್ಯಾರ್ಥಿ ಸಂಘ(ಎಎಸ್‍ಎ) ಮತ್ತು ಎಬಿವಿಪಿ ನಡುವಿನ ವಿವಾದದ ನೆಪವೊಡ್ಡಿ ವಿವಿಯಿಂದ ಹೊರಹಾಕಿರುವ ಐವರು  ದಲಿತ ಪಿಹೆಚ್‍ಡಿ ವಿದ್ಯಾರ್ಥಿಗಳಲ್ಲಿ ಒಬ್ಬರಾದ ರೋಹಿತ್ ವೆಮುಲ ಜನವರಿ 17ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ದಾರುಣ ಸುದ್ದಿ ವಿವಿಯ ಆವರಣದಲ್ಲಿ ಮಾತ್ರವಲ್ಲ ದೇಶಾದ್ಯಂತ ಶಿಕ್ಷಣ ರಂಗದಲ್ಲಿನ ಕೇಸರೀಕರಣದ ಈ ಕ್ರೂರ ವರ್ತನೆಯ ಬಗ್ಗೆ  ಆಕ್ರೋಶ ಉಂಟು ಮಾಡಿದೆ.

ಈಗಾಗಲೇ ‘ಜನಶಕ್ತಿ’ಯಲ್ಲಿ ಪ್ರಕಟಿಸಿರುವಂತೆ ರೋಹಿತ್, ಪ್ರಶಾಂತ್, ಶೇಷಯ್ಯ, ವಿಜಯ್ ಮತ್ತು ಸುಂಕಣ್ಣ ಈ ಐದು ದಲಿತ ಪಿಹೆಚ್‍ಡಿ ವಿದ್ಯಾರ್ಥಿಗಳನ್ನು ವಿವಿಯ ಅಧಿಕಾರಿಗಳು ತಕ್ಷಣವೇ ತಮ್ಮ ಹಾಸ್ಟೆಲ್ ಕೊಠಡಿಗಳನ್ನು ಖಾಲಿ ಮಾಡಬೇಕು ಎಂದು ಆದೇಶಿಸಿದ್ದರು. ಅವರನ್ನು ಖಾಲಿ ಮಾಡಿಸಿ ಆ ಕೊಠಡಿಗಳಿಗೆ ಬೀಗ ಹಾಕಿದ್ದರು. ಇದರಿಂದಾಗಿ ಅವರು ವಿವಿಯ ಆವರಣದಲ್ಲಿ ಹಾಕಿರುವ ಟಾರ್ಪಾಲೀನ್ ಸೂರಿನ ಅಡಿಯಲ್ಲಿ ತೀವ್ರ ಚಳಿಯನ್ನು ಸಹಿಸಿಕೊಂಡು ಇದ್ದಾರೆ. ಅವರೊಂದಿಗೆ ಬೇರೆ ವಿದ್ಯಾರ್ಥಿಗಳು ಮಾತಾಡದ ಹಾಗೆ ‘ಸಾಮಾಜಿಕ ಬಹಿಷ್ಕಾರ’ ಹಾಕಲಾಗಿದೆ. ಅವರು ಅಲ್ಲಿನ ಚುನಾವಣೆಗಳಲ್ಲಿ ಸ್ಪರ್ಧಿಸಬಾರದು, ಯಾವುದೇ ಸಾರ್ವಜನಿಕ ಚಟುವಟಿಕೆ ನಡೆಸಬಾರದು ಎಂದು ತಾಕೀತು ಮಾಡಲಾಗಿದೆ. ಇದನ್ನು ಬಿಜೆಪಿ ಮುಖಂಡರು ಮತ್ತು ಕೇಂದ್ರದ ಮಂತ್ರಿಗಳ ಒತ್ತಡದಿಂದ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಆಂಧ್ರಪ್ರದೇಶದ ಗುಂಟೂರಿನ ನಿವಾಸಿಯಾದ 26ವರ್ಷದ ರೋಹಿತ್ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಜೀವ ವಿಜ್ಞಾನ ವಿಭಾಗದಲ್ಲಿ ಸಿಎಸ್‍ಐಆರ್ ಸ್ಕಾಲರ್‍ಶಿಪ್ ಪಡೆದ ಸಂಶೋಧನಾ ವಿದ್ಯಾರ್ಥಿಯಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಸದಸ್ಯರಾಗಿದ್ದ ರೋಹಿತ್ ಭಾನುವಾರ (ಜನವರಿ 17) ಮಧ್ಯಾಹ್ನದ ವರೆಗೆ ವಿವಿಯ ಆಡಳಿತ ಕಟ್ಟಡದ ಬಳಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಸ್ವಲ್ಪ ಸಂಶೋಧನಾ ಕೆಲಸವನ್ನು ಮುಗಿಸಿಕೊಂಡು ಬರುತ್ತೇನೆಂದು ಗೆಳೆಯನೊಬ್ಬನ ಹಾಸ್ಟೆಲಿಗೆ ಹೋದ ರೋಹಿತ್ ಮತ್ತೆ ಕಾಣಿಸಲಿಲ್ಲ. ಈ ನಡುವೆ ಅವರ ತಾಯಿಯಿಂದ ಅವರ ಗೆಳೆಯನೊಬ್ಬನಿಗೆ ಫೋನ್ ಕರೆ ಬಂತು. ರೋಹಿತ್ ಫೋನ್ ಮಾಡಿದ್ದ, ಆತನ ದನಿಯಲ್ಲಿ ಬಹಳ ಹತಾಶೆ ಇದ್ದಂತಿತ್ತು, ಮತ್ತೆ ಫೋನ್ ಮಾಡಿದಾಗ ಉತ್ತರ ಸಿಕ್ಕಿಲ್ಲ ಎಂದು ತಾಯಿ ಆತಂಕದಿಂದ ಹೇಳಿದ್ದನ್ನು ಕೇಳಿ ಗೆಳೆಯರು ಆತನಿಗಾಗಿ ಹುಡುಕಾಡಿದರು. ಗೆಳೆಯನ ಹಾಸ್ಟೆಲ್ ಕೋಣೆ ಬಳಿ ಹೋದಾಗ ಅದು ಮುಚ್ಚಿತ್ತು. ಒಡೆದು ಒಳಹೋದಾಗ ರೋಹಿತ್ ನೇಣು ಹಾಕಿಕೊಂಡದ್ದು ಕಂಡು ಬಂತು. ಪಕ್ಕದಲ್ಲೇ ಒಂದು ಪತ್ರ ಇದ್ದು ತಾನು ಜೀವನದಲ್ಲಿ ಬಹಳ ಹತಾಶನಾಗಿದ್ದೇನೆ ಎಂಬ ಒಕ್ಕಣಿಕೆ ಇತ್ತು  ಎಂದು ‘ಡೆಕ್ಕನ್ ಕ್ರಾನಿಕಲ್’(ಜನವರಿ 18) ವರದಿ ಮಾಡಿದೆ.

ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‍ಎಫ್‍ಐ)ನ ಕೇಂದ್ರ ಕಾರ್ಯಕಾರಿ ಸಮಿತಿ ಈ ಆತ್ಮಹತ್ಯೆಯ ಬಗ್ಗೆ ಅತೀವ ಶೋಕ ವ್ಯಕ್ತಪಡಿಸುತ್ತ ಇದು ಎಬಿವಿಪಿ-ಆರೆಸ್ಸೆಸ್‍ನೊಂದಿಗೆ ಕೈಮಿಲಾಯಿಸಿದ ವಿವಿಯ ಆಡಳಿತಗಾರರ ಸತತ ಕಿರುಕುಳದ ಕ್ರೂರ ನಡವಳಿಕೆಯಿಂದಾಗಿ ಸಂಭವಿಸಿದೆ ಎಂದು ಖಂಡಿಸಿದೆ. ಎಬಿವಿಪಿಯ ಸುಳ್ಳು ಆಪಾದನೆಯ ಬಗ್ಗೆ ಸರಿಯಾದ ವಿಚಾರಣೆಯನ್ನೂ ಮಾಡದೆ ಈ ಐದು ದಲಿತ ವಿದ್ಯಾರ್ಥಿಗಳಿಗೆ ವಿವರಣೆ ಕೊಡಲೂ ಅವಕಾಶ ನೀಡದೆ ವಿವಿಯ ಆವರಣದಲ್ಲಿ ಮಕ್ತವಾಗಿ ಸಂಚರಿಸದಂತೆ ಮಾಡಲಾಗಿತ್ತು. ಇದನ್ನು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ವಿದ್ಯಾರ್ಥಿ ಸಮುದಾಯ ಪ್ರತಿಭಟಿಸುತ್ತಿತ್ತು ಎಂದು ಹೇಳಿರುವ ಎಸ್‍ಎಫ್‍ಐ, ಕೇಸರಿ ಪಡೆಗಳ ಆದೇಶದಂತೆ ಅಮಾನುಷವಾಗಿ, ಅನ್ಯಾಯಯುತವಾಗಿ ವರ್ತಿಸುತ್ತಿರುವ ಹೈದರಾಬಾದ್ ವಿಶ್ವವಿದ್ಯಾಲಯದ ಸರ್ವಾಧಿಕಾರಶಾಹೀ ವರ್ತನೆಯ ವಿರುದ್ಧ ದೇಶಾÁದ್ಯಂತ ವಿದ್ಯಾರ್ಥಿ ಸಮುದಾಯ ಎದ್ದು ನಿಲ್ಲಬೇಕು ಎಂದು ಕರೆ ನೀಡಿದೆ.

ಒಬ್ಬ ಯುವ ಸಂಶೋಧಕನ ಬಲಿ ತೆಗೆದುಕೊಂಡಿರುವ ಈ ಜಘನ್ಯ ಅಪರಾಧ ಎಸಗಿರುವವವರ ವಿರುದ್ಧ ಕಠಿಣÀ ಕ್ರಮ ಕೈಗೊಳ್ಳುವಂತೆ ದೇಶಾದ್ಯಂತ ಪ್ರತಿಭಟನೆ ನಡೆಸಬೇಕು ಎಂದು ಎಸ್‍ಎಫ್‍ಣೈ ತನ್ನ ಘಟಕಗಳಿಗೆ ಕರೆ ನೀಡಿದೆ. ಸಿಪಿಐ(ಎಂ) ರೋಹಿತ್ ವೆಮುಲರವರ ಆತ್ಮಹತ್ಯೆಗೆ ಕಾರಣವಾಗಿರುವ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಅಧಿಕಾರಿಗಳ ಕ್ರೂರ ಕ್ರಮವನ್ನು ಬಲವಾಗಿ ಖಂಡಿಸುತ್ತ, ಇದಕ್ಕೆ ಹೊಣೆಗಾರರಾಗಿರುವ ವಿವಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ವಿದ್ಯಾರ್ಥಿಗಳ ಆಗ್ರಹವನ್ನು ಬೆಂಬಲಿಸಿದೆ.