ಆಹಾರ ಭದ್ರತೆ ಕಾನೂನು ವಿರುದ್ಧ ಜಮ್ಮುನಲ್ಲಿ ಜನಾಕ್ರೋಶ

ಸಂಪುಟ: 
10
ಸಂಚಿಕೆ: 
03
Sunday, 10 January 2016

ರಾಷ್ಟ್ರೀಯ ಆಹಾರ ಭದ್ರತೆ ಕಾನೂನು (ಎನ್‍ಎಫ್‍ಎಸ್‍ಎ) ವಿರೋಧಿಸಿ ಡಿಸೆಂಬರ್ 25ರಂದು ಜಮ್ಮುನಲ್ಲಿ ಸಿಪಿಐ(ಎಂ) ಮತ್ತು ಸಿಐಟಿಯು ಕಾರ್ಯಕರ್ತರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ರಾಜಭವನಕ್ಕೆ ತೆರಳಲು ಯತ್ನಿಸಿದ ಕಾರ್ಯಕರ್ತರನ್ನು ತಡೆದ ಪೊಲೀಸರ ಜೊತೆ ಭಾರೀ ಸಂಘರ್ಷವೇ ಉಂಟಾಯಿತು.

ಆಹಾರ ಭದ್ರತೆ ಕಾನೂನನ್ನು ರಾಜ್ಯದಲ್ಲಿ ಜಾರಿ ಮಾಡುವುದನ್ನು ವಿರೋಧಿಸಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಹಾಗೂ ಕುಲ್‍ಗಾಂವ್ ಶಾಸಕ ಮಹಮದ್‍ಯೂಸುಫ್‍ತರಿಗಾಮಿ ನೇತೃತ್ವದಲ್ಲಿ ಪ್ರಸ್‍ಕ್ಲಬ್ ಪ್ರದೇಶದಿಂದ ಮೆರವಣಿಗೆ ನಡೆಯಿತು. `ಇದೊಂದು ಜನ ವಿರೋಧಿ ಕಾನೂನು. ಇದನ್ನು ಜಾರಿ ಮಾಡಿದರೆ ಭಾರಿ ಸಂಖ್ಯೆಯ ಜನರು ಆಹಾರದ ಹಕ್ಕಿನಿಂದ ವಂಚಿತರಾಗುತ್ತಾರೆ' ಎಂದು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಕಾ||ತರಿಗಾಮಿ ಹೇಳಿದರು. ರಾಜಭವನದ ಬಳಿ ಪ್ರತಿಭಟನೆ ನಡೆಸಿ ಈ ವಿಷಯವನ್ನು ರಾಜ್ಯಪಾಲರ ಗಮನಕ್ಕೆ ತರುವುದು ನಮ್ಮ ಉದ್ದೇಶವಾಗಿತ್ತು. ಆದರೆ ಪೊಲೀಸರು ನಮಗೆ ಅವಕಾಶ ನೀಡಲಿಲ್ಲ ಎಂದರು.

ಈ ಕಾನೂನನ್ನು ರಾಜ್ಯದಲ್ಲಿ ಜಾರಿ ಮಾಡುವುದೇ ಆದರೆ ಅದು ಸಿಪಿಐ (ಎಂ) ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ್ದ ಗೊತ್ತುವಳಿಗೆ ಅನುಗುಣವಾಗಿ ಇರಬೇಕು ಎಂದು ಅವರು ಆಗ್ರಹಿಸಿದರು. 2014ರ ಆಗಸ್ಟ್ ನಲ್ಲಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಈ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತ್ತು. ಅದರ ಪ್ರಕಾರ ಪ್ರತಿಕುಟುಂಬಕ್ಕೆ ಕೆಜಿಗೆ ಎರಡು ರೂಪಾಯಿಯಂತೆ 35 ಕೆ.ಜಿ. ಅಕ್ಕಿಯನ್ನು ನೀಡಬೇಕು ಎಂದು ಕಾ. ತರಿಗಾಮಿ ಹೇಳಿದರು.

"ಎನ್‍ಎಫ್‍ಎಸ್‍ಎ ಬದಲು ಈ ನಿರ್ಣಯವನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಬೇಕೆಂಬುದು ನಮ್ಮ ಬಯಕೆ" ಎಂದರು. 2011 ಮತ್ತು ಅದರ ನಂತರ ಜನಿಸಿದ ಜನರೂ ಸೇರಿದಂತೆ ಸಮಾಜದ ದೊಡ್ಡ ವಿಭಾಗ ಸಬ್ಸಿಡಿ ಸಹಿತ ರೇಷನ್ ವ್ಯವಸ್ಥೆಯಿಂದ ಹೊರಗಿದ್ದು ಅವರಿಗೂ ಈ ಸೌಲಭ್ಯವನ್ನು ವಿಸ್ತರಿಸಬೇಕು ಎಂದರು.

 

- ವಿಶ್ವಾಸ್