“ಯುಜಿಸಿ ಆಕ್ರಮಿಸಿ” ವಿದ್ಯಾರ್ಥಿ ಚಳುವಳಿ

ಸಂಪುಟ: 
9
ಸಂಚಿಕೆ: 
45
Sunday, 1 November 2015

UGCಅಕ್ಟೋಬರ್ 27 ರಂದು ನವದೆಹಲಿಯ ಯುಜಿಸಿ( ವಿಶ್ವದ್ಯಾಲಯ ಅನುದಾನ ಆಯೋಗ)ದ ಕಚೇರಿಯೆದುರು ಪ್ರತಿಭಟಿಸುತ್ತಿದ್ದ ವಿಧ್ಯಾರ್ಥಿಗಳ ಮೇಲೆ ತೀವ್ರ ಲಾಠೀ ಪ್ರಹಾರ ಮೋದಿ ಸರಕಾರದ ಉನ್ನತ ಶಿಕ್ಷಣದ ಖಾಸಗೀಕರಣದ ಧೋರಣೆಗೆ ಇನ್ನೊಂದು ಸಾಕ್ಷಿಯಾಯಿತು. ವಿದ್ಯಾರ್ಥಿಗಳು ನಾನ್-ನೆಟ್ ಸಂಶೋಧನಾ ಫೆಲೋಶಿಪ್ನ್ನು ನಿಲ್ಲಿಸುವ ಮೋದಿ ಸರಕಾರದ ಧೋರಣೆಯ ವಿರುದ್ಧ ಪ್ರತಿಭಟಿಸುತ್ತಿದ್ದರು.

ದಿಲ್ಲಿ ಪೊಲೀಸರು ತಾವು ಲಾಠಿ ಪ್ರಹಾರ ಮಾಡಿಯೇ ಇಲ್ಲ ಎಂದರು, ಆದರೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಚಿತ್ರಗಳು ಅದೆಷ್ಟು ಹಸಿ ಸುಳ್ಳು ಎಂಬುದನ್ನು ಸಾಬೀತು ಪಡಿಸಿವೆ. 100ಕ್ಕೂ ಹೆಚ್ಚು ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಅಟ್ಟಿಸಿಕೊಂಡು ಹೊಗಿ ಹೊಡದರು ಎಂದು ವರದಿಯಾಗಿದೆ.

ವಿಜ್ಞಾನ, ಮಾನವಿಕ ಮತ್ತಿತರ ವಿಷಯಗಳಲ್ಲಿ ಸಂಶೋಧನೆಗೆ ಧನಸಹಾಯ ಮಾಡಲು ಫೆಲೋಶಿಪ್ ಕೊಡಲಾಗುತ್ತದೆ. ಇದಕ್ಕೆ ಒಂದು ರಾಷ್ಟ್ರಮಟ್ಟದ ಪರೀಕ್ಷೆ ನಡೆಯುತ್ತದೆ. ಇದನ್ನು ಎನ್ಇಟಿ ಅಥವ ನೆಟ್(ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಎನ್ನುತ್ತಾರೆ. ಇದರಲ್ಲಿ ಪಾಸಾಗುವ ಮೊದಲ 10ಶೇ. ವಿದ್ಯಾರ್ಥಿಗಳಿಗೆ ಮಾತ್ರ ಕಿರಿಯ ಸಂಶೋಧನಾ ಫೆಲೋಶಿಪ್ (ಜೆಆರ್ಎಫ್) ಸಿಗುತ್ತದೆ. ಇದು 25000-28000 ರೂ. ಇರುತ್ತದೆ. ಆದರೆ ಇದು ಸಿಗುವುದು ದೇಶದಲ್ಲಿ ಎಂಫಿಲ್/ಪಿಹೆಚ್ಡಿಗೆ ದಾಖಲಾದ ಸಂಶೋಧನಾ ವಿದ್ಯಾರ್ಥಿಗಳಲ್ಲಿ ಸುಮಾರು 5ಶೇ. ವಿದ್ಯಾರ್ಥಿಗಳಿಗೆ ಮಾತ್ರ. ಏಕೆಂದರೆ ಭಾರತ ಸರಕಾರ ಶಿಕ್ಷಣಕ್ಕೆ ಒಟ್ಟಾರೆಯಾಗಿ ,ಅದರಲ್ಲೂ ಉನ್ನತ ಶಿಕ್ಷಣಕ್ಕೆ ಮಾಡುವ ಖರ್ಚು ಮುಂದುವರೆದ ದೇಶಗಳಿಗೆ ಹೋಲಿಸಿದರೆ ಅತ್ಯಲ್ಪ.

UGCಇದನ್ನು ಸ್ವಲ್ಪ ಮಟ್ಟಿಗಾದರೂ ನಿವಾರಿಸಲು ನೆಟ್ ಪರೀಕ್ಷೆಯಲ್ಲಿ ಪಾಸಾದ, ಆದರೆ ಫೆಲೋಶಿಪ್ ಸಿಗದ ವಿದ್ಯಾಥರ್ಿಗಳಿಗೆಂದು ನಾನ್-ನೆಟ್ ಫೆಲೋಶಿಪ್, ವಿಶೇಷವಾಗಿ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಆರಂಭಿಸಲಾಗಿತ್ತು. ಇದರ ಅಡಿಯಲ್ಲಿ 5000-8000 ರೂ. ಮಾತ್ರ ಕೊಡಲಾಗುವುದು. ಈ ಅಲ್ಪ ಸಹಾಯವನ್ನೂ ಮುಂದಿನ ವರ್ಷದಿಂದ ನಿಲ್ಲಿಸಲು ಮೋದಿ ಸರಕಾರದ ಮಾನವ ಸಂಪನ್ಮೂಲ ಮಂತ್ರಾಲಯ ನಿರ್ಧರಿಸಿದ್ದೇ ವಿದ್ಯಾರ್ಥಿಗಳ ಈ ಪ್ರತಿಭಟನೆಗೆ ಕಾರಣ. ಅಕ್ಟೋಬರ್ 20ರಿಂದ ಇದನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು ‘ಆಕ್ಯುಪೈ ಯುಜಿಸಿ'(ಯುಜಿಸಿ ಆಕ್ರಮಿಸಿಕೊಳ್ಳಿ) ಹೋರಾಟ ಆರಂಭಿಸಿದರು. ಇದರಿಂದ ಕುಪಿತಗೊಂಡ ಮೋದಿ ಸರಕಾರ ವಿದ್ಯಾರ್ಥಿಗಳ ಮೇಲೆ ತನ್ನ ಪೊಲೀಸರನ್ನು ಹರಿಯ ಬಿಟ್ಟು ತನ್ನ ಶಿಕ್ಷಣ-ವಿರೋಧಿ ಧೋರಣೆಯನ್ನು ಬಯಲು ಮಾಡಿಕೊಂಡಿದೆ.

UGCಮೋದಿ ಸರಕಾರ ಈ ಫೆಲೋಶಿಪ್ಅನ್ನು ನಿಲ್ಲಿಸಲು ನಿರ್ಧರಿಸಿದ ಕಾರಣ ‘ಹಣದ ಅಭಾವ’ ಮತ್ತು ಖಾಸಗೀಕರಣದ ಗೀಳು. ಉನ್ನತ ಶಿಕ್ಷಣದ ಬಜೆಟಿನಲ್ಲಿ 25ಶೇ, ಕಡಿತ ಮಾಡಲಾಗಿದೆ. ಅಲ್ಲದೆ ಡಬ್ಲ್ಯುಟಿಒ ಅಡಿಯಲ್ಲಿ ಶಿಕ್ಷಣವನ್ನೂ ಒಂದು ಅಂತರ್ರಾಷ್ಟ್ರೀಯ ಮಾರಾಟದ ಸರಕು ಎಂದು ಹಿಂದಿನ ಕಾಂಗ್ರೆಸ್ ಸರಕಾರ ಒಪ್ಪಿಕೊಂಡದ್ದನ್ನು ಭಾರತವನ್ನು ‘ಕಾಂಗ್ರೆಸ್ ಮುಕ್ತ’ಗೊಳಸುತ್ತೇನೆನ್ನುವ ಬಿಜೆಪಿ ನೇತೃತ್ವದ ಸರಕಾರ ಕಾಂಗ್ರೆಸಿಗಿಂತಲೂ ಹೆಚ್ಚಿನ ಹುಮ್ಮಸ್ಸಿನಿಂದ ಜಾರಿ ಮಾಡಲು ಹೊರಟಿದೆ. ಅದಕ್ಕಾಗಿ ಅದು ವಿದ್ಯಾರ್ಥಿಗಳ ಮೇಲೆ ಪೊಲೀಸ್ ದಮನ ನಡೆಸಲೂ ಹೇಸಿಲ್ಲ. 

ಇದಕ್ಕೆ ಈಗ ದೇಶಾದ್ಯಂತ, ಮುಖ್ಯವಾಗಿ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಖಂಡನೆ ವ್ಯಕ್ತವಾಗಿದೆ.