‘ಮೌಢ್ಯಾಚರಣೆ ಪ್ರತಿಬಂಧಕ ಕಾನೂನು ತನ್ನಿ’

ಸಂಪುಟ: 
9
ಸಂಚಿಕೆ: 
48
Sunday, 22 November 2015

ಚಾರಿತ್ರಿಕ ಸಮಾವೇಶದ ಒಕ್ಕೊರಲಿನ ಕರೆ
16 ನವೆಂಬರ್ 2015 ಸ್ವಾತಂತ್ರ್ಯ ಉದ್ಯಾನವನ ಒಂದು ಚಾರಿತ್ರಿಕ ಘಟನೆಗೆ ಸಾಕ್ಷಿಯಾಯಿತು. ಅಂದು ಸಾಹಿತಿಗಳು, ಕಲಾವಿದರು, ಚಿಂತಕರು, ಎಡಪಂಥೀಯ ಪ್ರಜಾಸತ್ತಾತ್ಮಕ ಸಂಘಟನೆಗಳ ಜನಪರ ಹೋರಾಟಗಾರರು/ನಾಯಕರು, ಕನ್ನಡ-ಪರ ಸಂಘಟನೆಗಳ ಕಾರ್ಯಕರ್ತರು, ವಿಜ್ಞಾನ ಚಳುವಳಿಯ ಕಾರ್ಯಕರ್ತರು/ನಾಯಕರು, ಧಾರ್ಮಿಕ ನಾಯಕರು, ಚಿಂತಕರು, ವಿದ್ಯಾರ್ಥಿಗಳು, ಯುವಜನರು, ಕಾರ್ಮಿಕರು, ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಸಮಾವೇಶ ‘ಮೌಢ್ಯಾಚರಣೆ ಪ್ರತಿಬಂಧಕ ಕಾನೂನು ತನ್ನಿ’ ಎಂದು ರಾಜ್ಯ ಸರಕಾರವನ್ನು ಒಕ್ಕೊರಲಿನಿಂದ ಒತ್ತಾಯಿಸಿತು.

ಈ ಸಮಾವೇಶವನ್ನು ‘ಕರ್ನಾಟಕ ಮೌಢ್ಯಾಚರಣೆ ಪ್ರತಿಬಂಧಕ ಕಾನೂನು ಜಾರಿಗಾಗಿ ಒತ್ತಾಯಿಸಿ ಕ್ರಿಯಾ ಸಮಿತಿ’ ಸಂಘಟಿಸಿತ್ತು. ಈ ಕ್ರಿಯಾ ಸಮಿತಿಯಲ್ಲಿ, ನೂರಕ್ಕೂ ಹೆಚ್ಚು ರಾಜ್ಯ ಮಟ್ಟದ ವಿದ್ಯಾರ್ಥಿಗಳ, ಯುವಜನರ, ಕಾರ್ಮಿಕರ, ರೈತರ, ಕೃಷಿ ಕೂಲಿಕಾರರ, ಮಹಿಳೆಯರ, ದಲಿತ, ಸಾಹಿತಿಗಳ, ವಿಜ್ಞಾನಿಗಳ, ಮೂಢನಂಬಿಕೆ-ವಿರೋಧಿ, ವಿಚಾರವಾದಿಗಳ, ಕಲಾವಿದರ, ಸಾಂಸ್ಕತಿಕ ಕನ್ನಡ-ಪರಸಂಘಟನೆಗಳು ಒಂದಾಗಿವೆ. ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಕ್ರಿಯಾ ಸಮಿತಿಗಳನ್ನು ಹೊಂದಿದೆ. ಈ ಕ್ರಿಯಾ ಸಮಿತಿ ಹಲವು ಇಂತಹ ಜಟಿಲ ಸಮಸ್ಯೆಗಳನ್ನು ಎದುರಿಸಲು ಇಂದು ಬೇಕಾಗಿರುವ ವಿಶಾಲ ಐಕ್ಯರಂಗದ ಒಂದು ಮಾದರಿಯಂತಿದೆ.

ಸಮಾವೇಶದ ಮೊದಲು ಈ ಸಾವಿರಾರು ಜನ ಕಾರ್ಪೊರೇಶನ್ ಬಳಿಯ ಬನ್ನಪ್ಪ ಪಾರ್ಕಿನಿಂದ ಸ್ವಾತಂತ್ರ್ಯ ಉದ್ಯಾನವನದ ಕಡೆಗೆ ಬೃಹತ್ ಮೆರವಣಿಗೆಯಲ್ಲಿ ನಡೆದು ಬಂದರು. ಹಲವು ಚಿಂತನಧಾರೆಗಳು, ಹೊರಾಟಗಾರ ಪ್ರಗತಿಪರ ಸಂಘಟನೆಗಳನ್ನು ಪ್ರತಿನಿಧಿಸುವ ಹಲವು ಬ್ಯಾನರುಗಳು ಬಾವುಟಗಳಿಂದ ಕೂಡಿದ ‘ಪರಿವರ್ತನೆಯ ಕಡೆಗೆ ನಡಿಗೆ’ಯಲ್ಲಿ ಸ್ಫೂರ್ತಿದಾಯಕ ಘೋಷಣೆಗಳು ಕೇಳಿ ಬಂದವು. “ಮೌಢ್ಯಾಚರಣೆ ಅಳಿಯಲಿ, ವೈಜ್ಞಾನಿಕ ದೃಷ್ಟಿ ಬೆಳೆಯಲಿ’, ‘ಮೌಢ್ಯಾಚರಣೆಗಳನ್ನು ತಡೆಗಟ್ಟಲು ಕಾನೂನು ಬೇಕೆ ಬೇಕು’ ಎಡ ಪಂಥೀಯ ಚಳುವಳಿ/ಸಂಘಟನೆಗಳನ್ನು ಪ್ರತಿನಿಧಿಸುವ ಕೆಂಬಾವುಟಗಳು, ದಲಿತ ಸಂಘಟನೆಗಳನ್ನು ಪ್ರತಿನಿಧಿಸುವ ನೀಲಿ ಬಾವುಟಗಳು, ಕನ್ನಡ-ಪರ ಸಂಘಟನೆಗಳ ಕೆಂಪು-ಹಳದಿ ಬಾವುಟಗಳು, ರೈತ ಸಂಘಟನೆಗಳ ಹಸಿರು ಬಾವುಟಗಳು, ಧಾರ್ಮಿಕ ನಾಯಕರ ಕಾವಿ ಬಟ್ಟೆಗಳು ಮೆರವಣಿಗೆಯನ್ನು ವರ್ಣರಂಜಿತಗೊಳಿಸಿ ಆಕರ್ಷಕವಾಗಿಸಿದವು. ಜಿಟಿಜಿಟಿ ಮಳೆ ಬರುತ್ತಿದ್ದರೂ ಸಾವಿರಾರು ಜನ ಮೆರವಣಿಗೆಯಲ್ಲಿ ಬರುವುದಕ್ಕಾಗಲಿ, ಸಮಾವೇಶಕ್ಕಾಗಲಿ ಅಡ್ಡಿಯಾಗಲಿಲ್ಲ ಎಂಬುದು ಗಮನಾರ್ಹ.

ನಿಡುಮಾಮಿಡಿ ಸ್ವಾಮೀಜಿಯವರು ಸೇರಿದಂದೆ ಹಲವು ಧಾರ್ಮಿಕ ನಾಯಕರು ಈ ಬೃಹತ್ ‘ಪರಿವರ್ತನೆಯ ಕಡೆಗೆ ನಡಿಗೆ’ಯ ಮೊದಲ ಸಾಲಿನಲ್ಲಿ ನಡೆದದ್ದು ಹಾಗೂ ಸಮಾವೇಶದಲ್ಲೂ ಹಾಜರಿದ್ದು ಕಾನೂನು ಪರವಾಗಿ ವಾದಿಸಿದ್ದು ಗಮನಾರ್ಹವಾಗಿತ್ತು. ಮೌಢ್ಯಾಚರಣೆ ಪ್ರತಿಬಂಧಕ ಕಾನೂನುಧರ್ಮ-ವಿರೋಧಿ, ಅದರಲ್ಲೂ ಹಿಂದೂಧರ್ಮ-ವಿರೋಧಿ ಎಂಬ ಸಂಘ ಪರಿವಾರದ ಅಪಪ್ರಚಾರವನ್ನು ಬಯಲಿಗೆಳೆಯುವಂತಿತ್ತು.

ಸಮಾವೇಶದ ಆಶಯ ನುಡಿಗಳನ್ನು ನಿಡುಮಾಮಿಡಿ ಮಠದ ವೀರಭದ್ರಚನ್ನಮಲ್ಲ ಸ್ವಾಮಿಜಿ ಆಡಿದರು. ಸಮಾವೇಶವನ್ನು ಸಾಣೆಹಳ್ಳಿ ಮಠದ ಡಾ. ಪಂಡಿತಾರಾಧ್ಯ ಸ್ವಾಮಿಜಿ ತಮಟೆ ಬಾರಿಸುವುದರ ಮೂಲಕ ಉದ್ಘಾಟಿಸಿದರು. ಸಮಾವೇಶವನ್ನು ಉದ್ದೇಶಿಸಿ ಮೌಢ್ಯಾಚರಣೆ ಪ್ರತಿಬಂಧಕ ಕಾನೂನು ತರಬೇಕೆಂದು ಒತ್ತಾಯಿಸಿ ಕ್ರಿಯಾ ಸಮಿತಿಯ ಸಂಚಾಲಕರು, ಕಾನೂನು ಪರಿಷ್ಕರಣ ಸಮಿತಿಯ ಸದಸ್ಯರುಗಳಲ್ಲಿ ಕೆಲವು ಪ್ರಮುಖರು ಮಾತನಾಡಿದರು. ಡಾ. ನರೇಂದ್ರ ನಾಯಕ್ ಭಾಷಣಕಾರರು ಮತ್ತು ಇತರ ಗಣ್ಯರನ್ನು ವೇದಿಕೆಗೆ ಬರಮಾಡಿಕೊಂಡರು. ಪ್ರೊ. ಚಂದ್ರಶೇಖರ ಪಾಟೀಲ ಸಮಾವೇಶದ ಸ್ವಾಗತ ಭಾಷಣ ಮಾಡಿದರು. ಜಿ.ಎನ್. ನಾಗರಾಜ್ ಕರ್ನಾಟಕ ಸರಕಾರಕ್ಕೆ ಸಲ್ಲಿಸಲಿದ್ದ ಸಮಾವೇಶದ ಮನವಿ ಪತ್ರವನ್ನು ಓದಿದರು. ಕರ್ನಾಟಕ ರಾಜ್ಯ ಸರಕಾರವನ್ನು ಪ್ರತಿನಿಧಿಸಿ ಸಮಾವೇಶಕ್ಕೆ ಆಗಮಿಸಿದ್ದ ಮಂತ್ರಿಗಳಾದ ಟಿ.ಬಿ.ಜಯಚಂದ್ರ ಮತ್ತು ಆಂಜನೇಯ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಸರಕಾರ ಮೌಢ್ಯ ಪ್ರತಿಬಂಧಕ ಕಾನೂನು ತರಲು ಬದ್ಧವಾಗಿದೆ ಎಂಬ ಭರವಸೆ ನೀಡಿದರು. ಸಮಾವೇಶದ ಸ್ಥಳದಲ್ಲಿ ಮೌಢ್ಯಾಚರಣೆಗಳ ವಿರುದ್ಧ ಪೋಸ್ಟರುಗಳ ಪ್ರದರ್ಶನ ಗಮನ ಸೆಳೆಯಿತು. ಇದನ್ನು ಹೆಚ್ಚಾಗಿ ಐಟಿ ಉದ್ಯೋಗಿಗಳು ಸಕ್ರಿಯವಾಗಿರುವ ‘ಮೌಢ್ಯಾಚರಣೆಗಳ ವಿರುದ್ಧ ವೇದಿಕೆ’ ಸಂಘಟಿಸಿತ್ತು.

ತನಗೂ ಪರರಿಗೂ ದೈಹಿಕ ಹಿಂಸೆ ಅಪಮಾನ ಮಾಡುವ, ತಾರತಮ್ಯ ತೋರಿಸುವ, ಸಮಸ್ಯೆಗಳಿಗೆ ಕಪಟ ಪರಿಹಾರ ತೋರಿಸಿ ಆರ್ಥಿಕ ಶೋಷಣೆ ಪ್ರತಿಬಂಧಿಸುವ ಕಾನೂನು ಬರಬೇಕು. ಈ ಸಮಾವೇಶದ, ಕ್ರಿಯಾ ಸಮಿತಿಯ, ಮತ್ತು ಚಳುವಳಿಯ ಕೆಲಸ ಇಂತಹ ಕಾನೂನು ತರುವುದಕ್ಕೆ ಸೀಮಿತವಲ್ಲ. ಅಂತಹ ಕಾನೂನು ಬಂದ ಕೂಡಲೇ ಅದು ಮುಗಿಯುವುದೂ ಇಲ್ಲ. ಈ ಕಾನೂನಿನ ಪರಿಣಾಮಕಾರಿ ಜಾರಿ ಆಗುವ ವರೆಗೆ, ಸಾರ್ವತ್ರಿಕವಾಗಿ ವೈಜ್ಞಾನಿಕ ಮನೋಭಾವ ಮೂಡುವವರೆಗೆ, ಮತ್ತು ಎಲ್ಲಾ ಮೌಢ್ಯಾಚಾರಣೆಗಳು ನಿಲ್ಲುವವರೆಗೆ ಈ ಕೆಲಸ ಮುಂದುವರೆಯುತ್ತದೆ ಎಂಬುದು ಹಲವು ಭಾಷಣಕಾರರ ಮಾತಿನಲ್ಲಿ ಮೂಡಿಬಂದ ಪ್ರಮುಖ ಅಂಶ.

ಸಮಾವೇಶದಲ್ಲಿ ಕೇಳಿ ಬಂದ ದನಿಗಳು

ಮೌಢ್ಯಾಚಾರಣೆ ಪ್ರತಿಬಂಧಕ ಕಾಯಿದೆ ಯಾವುದೇ ಧರ್ಮದ, ದೇವರ, ಸಮುದಾಯದ, ಧಾರ್ಮಿಕ ಸದಾಚರಣೆಗಳ ವಿರುದ್ಧ ಅಲ್ಲ. ಮಾನವೀಯತೆಯ ವಿರುದ್ಧವಾದ, ತಾರತಮ್ಯಕ್ಕೆ  ಹಾಗೂ ಹಿಂಸೆಗೆ ಕಾರಣವಾಗುವ ಆಚರಣೆಗಳನ್ನು ನಿಷೇಧಿಸಬೇಕೆಂಬುದಷ್ಟೇ  ಈ ಕಾಯಿದೆಯ ಉದ್ದೇಶ. ಈ ಬಗ್ಗೆ ಜನಾಭಿಪ್ರಾಯ ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು.

– ವೀರಭದ್ರ ಚನ್ನಮಲ್ಲ ಸ್ವಾಮೀಜಿ, ನಿಡುಮಾಮಿಡಿ ಮಠ

ಮೌಢ್ಯಾಚರಣೆ ಪ್ರತಿಬಂಧಕ ಕಾಯಿದೆ ಮೊದಲಿಗೆ ಸರಕಾರಿ ಸೌಧಗಳಲ್ಲಿ, ಕಚೇರಿಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಜಾರಿಗೆ ಬರಬೇಕು. ಇವು ಧರ್ಮಾತೀತವಾಗಿ, ಜಾತ್ಯತೀತವಾಗಿ, ಸಂವಿಧಾನದ ಆಶಯದಂತೆ ನಡೆಯಬೇಕು. ಇಲ್ಲವೆ ಸರ್ವದರ್ಮಗಳ ಸಂಕೇತವಾಗಿರಬೇಕು. ಯಾವುದೇ ವೈಯಕ್ತಿಕ ಧಾರ್ಮಿಕ ಮೌಢ್ಯಾಚರಣೆಗಳು ಅಲ್ಲಿ ನಡೆಯಬಾರದು. ಮೌಢ್ಯಾಚರಣೆಗಳ ಕೇಂದ್ರಗಳಾಗಿರುವ ಮಠಗಳೂ ಕಾಯಿದೆಯನ್ನು ತಮ್ಮ ಸಂಸ್ಥೆಯಲ್ಲಿ ಮೊದಲು ಜಾರಿಗೆ ತರಬೇಕು. ಕಾಯಿದೆ ಮೌಢ್ಯಾಚರಣೆಗಳ ಬಗ್ಗೆ ಸ್ಪಷ್ಟವಾಗಿರಬೇಕು, ಏಕೆಂದರೆ ನಂಬಿಕೆ ಮತ್ತು ಮೂಢನಂಬಿಕೆಗಳ ನಡುವೆಗೆರೆ ಎಳೆಯುವುದು ಕಷ್ಟದ ಕೆಲಸ.

– ನಾಡೋಜ ಬರಗೂರು ರಾಮಚಂದ್ರಪ್ಪ

ಸತ್ಯದ ಪರ ಮಾತನಾಡುವವರನ್ನು ಶಾಸ್ತ್ರ ಮತ್ತು ಶಸ್ತ್ರಗಳು ನಿಯಂತ್ರಿಸುತ್ತವೆ. ಶಸ್ತ್ರವೆಂಬ ಆಡಳಿತ ವರ್ಗ ಮತ್ತು ಶಾಸ್ತ್ರವೆಂಬ ಪುರೋಹಿತ ವರ್ಗಗಳು ಇಂದು ಸತ್ಯ ಹೇಳುವವರನ್ನು ಅತ್ಯಂತ ಆಳಕ್ಕೆ ತಳ್ಳುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಾಜ್ಞರು ಸತ್ಯದ ಪರ ನಿಲ್ಲಬೇಕು. ಮಠಾಧೀಶರು ಮೊದಲು ತಮ್ಮ ಮಠಗಳಲ್ಲಿನ ಮೌಢ್ಯಾಚರಣೆಗಳಿಗೆ ತಡೆಯೊಡ್ಡಿ ಬಳಿಕ ಸಮಾಜದ ಕಟ್ಟುವಿಕೆಗೆ ಪದಾರ್ಪಣ ಮಾಡಬೇಕು. ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಾದ ಮಾಧ್ಯಮಗಳು ದಾರಿತಪ್ಪಿಸುತ್ತಿವೆ. ಮಾಧ್ಯಮಗಳೂ ಮೌಢ್ಯಾಚರಣೆಯ ಸನ್ನಿಯಿಂದ ಹೊರ ಬರಬೇಕಾದ ಅಗತ್ಯವಿದೆ. ಸಮಾಜದಲ್ಲಿ ವಿಜೃಂಭಿಸುತ್ತಿರುವ ಮಾನಸಿಕ ಭಯೋತ್ಪಾದಕರನ್ನು ನಿಯಂತ್ರಿಸಬೇಕು.

– ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಾಣೆಹಳ್ಳಿ ಮಠ

ಇನ್ನೆಷ್ಟು ದಿನ ನಮ್ಮ ದಲಿತ ಅಕ್ಕತಂಗಿಯರು ಉಳ್ಳವರ ಚಟತೀರಿಸಲು ದೇವದಾಸಿಯರಾಗಬೇಕು? ಇನ್ನೆಷ್ಟು ದಿನ ನಮ್ಮ ಗ್ರಾಮೀಣ ಅಕ್ಕತಂಗಿಯರು ಬಾನಾಮತಿಗೆ ಬಲಿಯಾಗಬೇಕು? ಬಾನಾಮತಿ ಮಾಡಿಸುವುದು, ಬಿಡಿಸುವುದು ಒಂದು ದಂಧೆ ಯಾಗಿ ಬಿಟ್ಟಿದೆ. ಇನ್ನೆಷ್ಟು ದಿನ ನಿಧಿಯ ಆಸೆಗೆ ಕರುಳ ಬಳ್ಳಿಯನ್ನು ಬಲಿ ಕೊಡಬೇಕು? ಹಿಂದೆ ಸರಕಾರ ಮೌಢ್ಯಾಚರಣೆ ಪ್ರತಿಬಂಧಕ ಕಾನೂನು ತರಲು ಹೊರಟಾಗ ಕೆಲವು ಮಠಾಧೀಶರು ಇದು ಸರಕಾರದ ಕೆಲಸ ಅಲ್ಲ. ಇದು ಧರ್ಮಗುರುಗಳ ಕೆಲಸ. ನಾವು ಮಾಡುತ್ತೇವೆ ಎಂದರು. ಆಗ ಸರಕಾರ ಹಿಂಜರಿಯಿತು. ಈಗ ಈ ವೇದಿಕೆಯಲ್ಲಿ ಇರುವ ನಿಜವಾದ ಧಾರ್ಮಿಕ ಗುರುಗಳು ಇಂತಹ ಕಾನೂನು ತನ್ನಿ ಎಂದು ಒತ್ತಾಯಿಸುತ್ತಿದ್ದಾರೆ. ಇನ್ನು ಸರಕಾರ ತಡ ಮಾಡಬಾರದು.

– ಕೆ. ನೀಲಾ

ಮೌಢ್ಯಾಚರಣೆಗಳು ಪಾಳೆಯಗಾರಿ ಸಂಸ್ಕ್ರತಿಯ ಪಳೆಯುಳಿಕೆಗಳು. ಮನುಷ್ಯ ಮನುಷ್ಯರ ನಡುವೆ ಜಾತಿ, ಲಿಂಗಗಳ ಆಧಾರದ ಮೇಲೆ ತಾರತಮ್ಯ, ಅವಮಾನ, ಹಿಂಸೆಗಳನ್ನು ಮಾನವ ಘನತೆಗೆ ಕುಂದು ತರುವ ಅಮಾನವೀಯ ಕ್ರೂರ ಆಚರಣೆಗಳನ್ನು ದೇವರು ಮತ್ತು ಧರ್ಮದ ಹೆಸರನಲ್ಲಿ ಸ್ಥಿರಗೊಳಿಸಲಾಗಿದೆ. ಇಂತಹ ಅಮಾನವೀಯ ಆಚರಣೆಗಳನ್ನು ನಿಷೇಧಿಸಬೇಕು ಎಂದಷ್ಟೇ ನಮ್ಮ ಬೇಡಿಕೆ. ಇದು ನಾಗರಿಕ ಸಮಾಜದ ಕನಿಷ್ಟ ಬೇಡಿಕೆ.

– ಪ್ರೊ. ಕೆ.ಎಂ. ಮರುಳಸಿದ್ದಪ್ಪ

ಮನುಷ್ಯ ಇವತ್ತು ದುರಾಸೆ, ವೇಗ, ದುಗುಡ, ಆತಂಕಗಳಿಂದ ತತ್ತರಿಸುತ್ತಿದ್ದಾನೆ. ಆದ್ದರಿಂದ ಮೂಢನಂಬಿಕೆಗಳ ಹಿಂದೆ ದಿಕ್ಕೆಟ್ಟವನಂತೆ ಓಡುತ್ತಿದ್ದಾನೆ. ಆತ ಸಾಂತ್ವನಕ್ಕಾಗಿ, ಸಮಾಧಾನಕ್ಕಾಗಿ, ನೆಮ್ಮದಿಗಾಗಿ ಹುಡುಕಾಡುತ್ತಿದ್ದಾನೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ ನಂಬಿಕೆಯನ್ನು ಉಳಿಸಿಕೊಂಡು ಮೂಢನಂಬಿಕೆಯ ಹುಣ್ಣನ್ನಗಾಯವನ್ನ ಬೇರ್ಪಡಿಸಬೇಕು. ಯಾವುದನ್ನು ನಿಷೇಧಿಸಬೇಕು, ಯಾವುದರ ಬಗ್ಗೆ ಅರಿವು ಮೂಡಿಸಬೇಕು ಎನ್ನುವ ತಿಳುವಳಿಕೆ ಮುಖ್ಯ.

– ದೇವನೂರ ಮಹಾದೇವ

ಯಾವುದೇ ಕಾನೂನಿಗೆ ಜನಾಭಿಪ್ರಾಯದ ಬೆಂಬಲ ಇರಬೇಕಾಗುತ್ತದೆ. ಈ ಸಮಾವೇಶ ನೋಡಿದರೆ ಅಂತಹ ಜನಾಭಿಪ್ರಾಯ ಇದೆ ಅಂತ ಗೊತ್ತಾಗುತ್ತದೆ. ಮೌಢ್ಯಾಚರಣೆ ಪ್ರತಿಬಂಧಕ ಕಾಯಿದೆ ಜಾರಿ ಆಗಬೇಕಾದರೆ ಎಚ್ಚೆತ್ತ ನಾಗರಿಕ ಸಮಾಜ, ದಕ್ಷ ಸ್ವಯಂ-ಸೇವಾ ಸಂಸ್ಥೆಗಳು, ಪ್ರಾಮಾಣಿಕ ಅಧಿಕಾರಿಗಳು, ಕ್ರಿಯಾಶೀಲ, ನ್ಯಾಯಾಂಗ, ಮತ್ತು ಮಾಧ್ಯಮಗಳ ಪಾತ್ರ ಮುಖ್ಯ

– ನ್ಯಾ. ಶಿವರಾಜ ಪಾಟೀಲ್

ಮಹಿಳೆಯರು ಟಿವಿ ಮುಂದೆ ಕುಳಿತು ಜ್ಯೋತಿಷ್ಯ ಕಾರ್ಯಕ್ರಮ ನೋಡುವುದರಿಂದ ಮಾಧ್ಯಮಗಳಿಗೆ ಟಿ.ಆರ್.ಪಿ.ರೇಟ್ ಹೆಚ್ಚಾಗಿದೆ. ನಾವು ಇಂತಹ ಕಾರ್ಯಕ್ರಮಗಳನ್ನು ನೋಡುವುದಿಲ್ಲ ಎಂದು ಪತ್ರ ಬರೆಯಿರಿ. ಆಗ ಇಂತಹ ಕಾರ್ಯಕ್ರಮಗಳು ಕಡಿಮೆಯಾಗುತ್ತವೆ.

– ಕೆ.ಎಸ್. ವಿಮಲಾ

ಚಾರ್ವಾಕರ ಕಾಲದಿಂದಲೂ ಮೌಢ್ಯಾಚರಣೆಯ ವಿರುದ್ಧ ಹೋರಾಟ ನಡೆಯುತ್ತಿದೆ. ಶೂದ್ರರಿಗೆ, ದಲಿತರಿಗೆ, ಮಹಿಳೆಯರಿಗೆ ಕೊಟ್ಟಿರುವ ಶಿಕ್ಷೆಗಳನ್ನೇ ಆ ಮೇಲೆ ನಂಬಿಕೆಯಾಗಿಸಿ ಆಚರಣೆಗಳನ್ನಾಗಿಸಲಾಯಿತು. ಅಂತಹವುಗಳ ಮೂಲಕ ಅವರ ಚಿತ್ರಹಿಂಸೆ 21ನೇ ಶತಮಾನದಲ್ಲೂ ಮುಂದುವರೆಯುತ್ತಿರುವುದು ನಾಗರಿಕ ಸಮಾಜ ನಾಚಿಕೆ ಪಟ್ಟುಕೊಳ್ಳುವಂತಹ ಸಂಗತಿ.

– ಪ್ರೊ. ಎಸ್.ಜಿ. ಸಿದ್ಧರಾಮಯ್ಯ

 

Freedom park   Freedom park

 

 

 

 

 

 

 

 

 

tbjayachandra, nidumamidi swamijee       chandrashekar patil