'ಸನಾತನ ಸಂಸ್ಥಾ’ದ ’ಗುಹೆ’ಯಲ್ಲೇ ಪ್ರತಿಭಟನೆ

ಸಂಪುಟ: 
9
ಸಂಚಿಕೆ: 
44
Sunday, 25 October 2015

ದಾಭೋಲ್ಕರ್, ಪನ್ಸಾರೆ, ಕಲ್ಬುರ್ಗಿಯವರುಗಳ ಸರಣಿ ಹತ್ಯೆಗಳ ಹಿಂದೆ ಇರುವ ’ಸನಾತನ ಸಂಸ್ಥಾ’ದ ಮುಖ್ಯ ಕಚೇರಿ ಇರುವುದು ಗೋವಾದ ರಾಮನಾಥಿ ಎಂಬ ಹಳ್ಳಿಯಲ್ಲಿ. ಅದರ ಮುಖ್ಯ ಕಚೇರಿ ಪ್ರಾಚೀನ ರಾಮನಾಥಿ ದೇವಾಲಯದ ಬಳಿ ಇದ್ದರೂ, ಅದೇನು ಆಶ್ರಮವಲ್ಲ.

ಅದೊಂದು ಫೈವ್-ಸ್ಟಾರ್ ರೆಸಾರ್ಟಿನಂತೆ ಇದೆ. ಹಳ್ಳಿಯ ಯಾರಿಗೂ ಅಲ್ಲಿ ಪ್ರವೇಶವಿಲ್ಲ. ಯಾರ‍್ಯಾರೊ ಹೊರಗಿವರು ಬಂದು ಹೋಗಿ ಮಾಡುತ್ತಾರೆ. ಆದರೆ ಅದಕ್ಕೆ ಸರಕಾರ ಮತ್ತು ಆಡಳಿತದ ಶ್ರೀರಕ್ಷೆ ಇದೆ. ಸ್ಥಳೀಯ ಎಂ.ಎಲ್.ಎ. ಹೆಂಡತಿ ಸಂಸ್ಥಾದ ಮುಖ್ಯ ಕಚೇರಿಯ ಆಡಳಿತದ ಭಾಗವಾಗಿದ್ದಾರೆ. ಸೀರಿಯಲ್ ಹತ್ಯೆಗಳಲ್ಲಿ ಸನಾತನ ಸಂಸ್ಥಾದ ಸದಸ್ಯರ ಪಾತ್ರ ಮತ್ತು ಅದರ ಸಂಶಯಾಸ್ಪದ ಚಟುವಟಿಕೆಗಳಿಂದ ರೋಸಿ ಹೋದ ರಾಮನಾಥಿ ಹಳ್ಳಿಯ ಜನ ಸಂಸ್ಥಾದ ಮುಖ್ಯ ಕಚೇರಿ ಎದುರಲ್ಲೇ ಅಕ್ಟೋಬರ್ 11 ರಂದು ಚಾರಿತ್ರಿಕ ಪ್ರತಿಭಟನೆ ಹಮ್ಮಿಕೊಂಡಿತು. ಅದನ್ನು ತಡೆಯಲು ಜಿಲ್ಲಾಡಳಿತ ಹರಸಾಹಸ ಪಟ್ಟಿತು. ಆದರೆ ಪ್ರತಿಭಟನೆ ಸಭೆ ಹಮ್ಮಿಕೊಂಡಿದ್ದ ರಾಮನಾಥಿ ಯುವಕ ಸಂಘ ತನ್ನ ಪಟ್ಟು ಬಿಡಲಿಲ್ಲ.

’ನಾವೆಲ್ಲಾ ಪನ್ಸಾರೆ’ ಎಂದು ಬರೆದ ಟೋಪಿ ಧರಿಸಿದ ಮತ್ತು ಬ್ಯಾನರ್ ಹಿಡಿದ ಸಿಐಟಿಯು ಜಾಥಾ ಬಂದು ಪ್ರತಿಭಟನೆ ಸಭೆಯ ಹುರುಪನ್ನು ಹೆಚ್ಚಿಸಿತು. ಯುವಕ ಸಂಘದ ನಾಯಕ ಸೌರಭ್ ಲೋಟ್ಲೇಕರ್, ಸಾಮಾಜಿಕ ಕಾರ್ಯಕರ್ತ ರಮೇಶ್ ಗವಾಸ್, ಆದಿವಾಸಿ ನಾಯಕ ಗೋವಿಂದ ಗಾವಡೆ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಲೇಖಕ ಎನ್. ಶಿವದಾಸ್, ಸಿಪಿಐ ನಾಯಕ ಕ್ರಿಸ್ಟೊಫರ್ ಫೊನ್ಸೆಕಾ, ಸಿಪೀಐ(ಎಂ) ಕಾರ್ಯದರ್ಶಿ ಥಾಲ್ಮನ್ ಪೆರೇರಾ, ಸಿಐಟಿಯು ನಾಯಕ ವಿವೇಕ್ ಮೊಂಟೇರೊ, ರಾಷ್ಟ್ರ ಸೇವಾದಳದ ಜವಾಹರ್ ಬರ್ವೆ, ಎಐಟಿಯುಸಿ ನಾಯಕ ರಾಜು ಮಂಗೇಶ್ಕರ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಾತನಾಡಿದವರು ಸನಾತನ ಸಂಸ್ಥಾದ ಮುಖ್ಯ ಕಚೇರಿಯನ್ನು ರಾಮನಾಥಿಯಿಂದ ಹೊರಕ್ಕೆ ಕಳಿಸಬೇಕೆಂದು ಒತ್ತಾಯ ಪಡಿಸಿ, ಇಲ್ಲದಿದ್ದರೆ ಚಳುವಳಿಯನ್ನು ತೀವ್ರಗೊಳಿಸಬೇಕೆಂದು ಎಚ್ಚರಿಸಿದರು.

ಅವರು ಸಂಸ್ಥಾದ ಬಗ್ಗೆ ಹಲವು ಆಸ್ಫೋಟಕ ಪ್ರಶ್ನೆಗಳನ್ನು ಕೇಳಿದರು. ಕಾನೂನಿನ ಪ್ರಕಾರ ಸಂಸ್ಥಾದ ಕಚೇರಿಯಲ್ಲಿರುವ ಎಲ್ಲರು ಸಿ ಫಾರಂ ತೆಗೆದುಕೊಂಡು ಪೋಲಿಸ್ ಸ್ಟೇಶನಿನಲ್ಲಿ ಏಕೆ ರಿಜಿಸ್ಟರ್ ಮಾಡಿಲ್ಲ?, ಧಾರ್ಮಿಕ ಆಶ್ರಮ ಎಂದು ಹೇಳುವ ಈ ಕಚೇರಿಗೆ ದೊಡ್ಡ ಪ್ರಮಾಣದಲ್ಲಿ ಕಾಂಡೋಮ್ ಏಕೆ ಪೂರೈಕೆ ಆಗುತ್ತದೆ?, ಎಂ.ಎಲ್.ಎ. ಸಂಸ್ಥಾದ ಇಷ್ಟೊಂದು ಅಭಿಮಾನಿಯಾಗಿದ್ದರೆ ಅವನ ಹಳ್ಳಿಯಲ್ಲಿ ಏಕೆ ಈ ಕಚೇರಿಯನ್ನು ಸ್ಥಾಪಿಸಬಾರದು? ಮಹಾರಾಷ್ಟ್ರದ ಥಾಣೆ, ವಾಶಿ, ಗೋವಾದಲ್ಲಿ ಬಾಂಬ್ ದಾಳಿ ಮಾಡಿದ್ದು ಸನಾತನ ಸದಸ್ಯರು ಎಂದು ಗೊತ್ತಿರುವಾಗ ಅದನ್ನು ನಿಷೇಧ ಏಕೆ ಮಾಡಿಲ್ಲ? ಮುಂತಾದವು ಕೇಳಲಾದ ಪ್ರಶ್ನೆಗಳು. ’ಸನಾತನ ಸಂಸ್ಥಾದ ಮುಖ್ಯ ಕಚೇರಿಯನ್ನು ರಾಮನಾಥಿಯಿಂದ ಕಳಿಸಿಯೇ ತೀರುತ್ತೇವೆ’, ’ನಾವೆಲ್ಲಾ ಪನ್ಸಾರೆ’ ಎಂಬ ಘೋಷಣೆಗಳೊಂದಿಗೆ ಸಭೆ ಮುಕ್ತಾಯವಾಯಿತು.