ಮೋದಿ ಸರಕಾರ ಆದಿವಾಸಿಗಳ ಮೇಲೆ ಯುದ್ಧ ಸಾರಿದ್ದಾರೆ

ಸಂಪುಟ: 
9
ಸಂಚಿಕೆ: 
49
Sunday, 29 November 2015

ಆದಿವಾಸಿ ಸಮಾವೇಶದಲ್ಲಿ ಬೃಂದಾ

`ಸ್ವಾತಂತ್ರ್ಯದ 68 ವರ್ಷಗಳ ಕಾಲದುದ್ದಕ್ಕೂ ಬುಡಕಟ್ಟು ಜನರಿಗೆ ದ್ರೋಹವೆಸಗುತ್ತಾ ಬರಲಾಗಿದೆ. ಸಾಗುವಳಿ ಮಾಡಿದ ಅರಣ್ಯ ಭೂಮಿಗೆ ಹಾಗೂ ಅರಣ್ಯದ ಉತ್ಪನ್ನಗಳ ಮೇಲೆ ಹಕ್ಕು ನೀಡುವ `ಅರಣ್ಯ ಹಕ್ಕು ಕಾಯ್ದೆ’ ಜಾರಿಯಾಗುತ್ತಿಲ್ಲ.  ಅವರನ್ನು ಸಾಗುವಳಿ ಮಾಡಲಾಗುತ್ತಿದ್ದ ಜಮೀನನ್ನು ಕಿತ್ತುಕೊಂಡು ಹೊರಗಟ್ಟಲಾಗುತ್ತಿದೆ. ಬುಡಕಟ್ಟು ಜನರ ಪಾಲಿಗೆ  ಪ್ರಜಾಪ್ರಭುತ್ವ ಇನ್ನೂ ಜಾರಿಗೆ ಬಂದಿಲ್ಲ. ಆಂಧ್ರದ ವಿಶಾಖ ಪಟ್ಟಣದಲ್ಲಿ ಬಾಕ್ಸೈಟ್ ಗಣಿಗುತ್ತಿಗೆದಾರರು ಕಾಡಿಗೆ ಕಾಲಿಡದ ಹಾಗೆ ಹಿಮ್ಮೆಟ್ಟಸಿದ್ದಾರೆ. ಇದೆ ರೀತಿಯ ತೀವ್ರ ಚಳುವಳಿಯ ಮೂಲಕ ದೇಶದಲ್ಲಿಯೂ ಆದಿವಾಸಿ ಪ್ರಜಾಫಭುತ್ವವನ್ನು ಸ್ಥಾಪಿಸುತ್ತಾರೆ.’ ಎಂದು ಮಾಜಿ ಸಂಸದರೂ, ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್(ಎಎಆರ್‍ಎಂ) ರಾಷ್ಟ್ರೀಯ ಉಪಾಧ್ಯಕ್ಷರೂ ಆದ ಬೃಂದಾಕಾರತ್ ಅವರು ಹೇಳಿದರು.

ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆ.ಹೆಚ್. ಪಾಟೀಲ್ ಸಭಾಂಗಣದಲ್ಲಿ ಇಂದು `ಆದಿವಾಸಿ-ಬುಡಕಟ್ಟು ಸಮುದಾಯಗಳ ಬದುಕು-ಬವಣೆ’ ಕುರಿತು ಎರಡು ದಿನಗಳ ರಾಜ್ಯಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

Brinda Karat in Bengaluru

`ಕಾಡಿನಲ್ಲಿ ಸಾಂಪ್ರದಾಯಿಕವಾಗಿ ವಾಸ ಮಾಡುತ್ತಾ ಭೂಮಿಯ ಹಕ್ಕನ್ನು ಅನುಭವಿಸುತ್ತಾ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿಕೊಂಡು ಜೀವಿಸುತ್ತಿದ್ದ ಬುಡಕಟ್ಟು ಜನರನ್ನು ಅಭಿವೃದ್ದಿಯ ಹೆಸರಿನಲ್ಲಿ ಅತಿಕ್ರಮಣದಾರರು ಎಂದು ಕರೆದು ಬ್ರಿಟೀಷರು ಒಕ್ಕಲೆಬ್ಬಿಸಿ ಓಡಿಸಿದರು. ಹಲವು ಬುಡಕಟ್ಟುಗಳನ್ನು ಕಳ್ಳರು, ದರೋಡೆಕೋರರು ಎಂದು ಕರೆದು, ಅವರನ್ನು `ಕ್ರಿಮಿನಲ್ ಟ್ರೈಬ್’ ಎಂದು ಹೆಸರಿಸಲಾಯಿತು.

ಬಿರ್ಸಾ ಮುಂಡ, ಸಿದ್ದು, ಕಾನು ಮುಂತಾದ ಬುಡಕಟ್ಟು ನಾಯಕರ ನೇತೃತ್ವದಲ್ಲಿ ಬ್ರಿಟಿಷ್ ಆಡಳಿತದ ವಿರುದ್ದ ಚಳುವಳಿ ನಡೆದು ಹಲವರು ಹುತಾತ್ಮರಾದರು. ಸ್ವಾಂತಂತ್ರ್ಯಾ ನಂತರ ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನದಲ್ಲಿ ಬುಡಕಟ್ಟು ಜನರ ಹಕ್ಕುಗಳನ್ನು ಶೆಡ್ಯುಲ್ 5 ರಲ್ಲಿ ಖಾತರಿ ಪಡಿಸಲಾಗಿದೆ. ಆದರೆ ಸ್ವಾತಂತ್ರ್ಯದ 68 ವರ್ಷಗಳ ಕಾಲದುದ್ದಕ್ಕೂ ಬುಡಕಟ್ಟು ಜನರಿಗೆ ದ್ರೋಹವೆಸಗುತ್ತಲೇ ಬರಲಾಗಿದೆ ಹೊರತು ಬುಡಕಟ್ಟು ಜನರ ಬದುಕಿಗೆ ಭದ್ರತೆ ದೊರೆಯಲಿಲ್ಲ. ಈ ಹಿನ್ನೆಲೆಯಲ್ಲಿ ಎಡಪಕ್ಷಗಳು ಪಾರ್ಲಿಮೆಂಟಿನಲ್ಲಿ ಬೇಡಿಕೆ ಇಟ್ಟು, ಚಳುವಳಿ ನಡೆಸಿದ್ದರ ಪರಿಣಾಮವಾಗಿ `ಅರಣ್ಯ ಹಕ್ಕು ಕಾಯ್ದೆ-2005’ ಅಂಗೀಕಾರವಾಯಿತು.

ಅರಣ್ಯ ಭೂಮಿ ಸಾಗುವಳಿ ಸಕ್ರಮಗೊಳಿಸಲು 75 ವರ್ಷ ವ್ಯವಸಾಯ ನಡೆಸಿರುವುದಕ್ಕೆ ದಾಖಲೆ ಒದಗಿಸಬೇಕೆಂಬ ಷರತ್ತನ್ನು ಆದಿವಾಸಿ ಬುಡಕಟ್ಟು ಜನರಿಗೂ ಅನ್ವಯಿಸಲು ಅಂದಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಉದ್ದೇಶಿತ್ತು. ಆದರೆ ಎಡಪಕ್ಷಗಳ ಹೋರಾಟದಿಂದ ಈ ಧೋರಣೆ ಕಾಯ್ದೆಯಾಗಲಿಲ್ಲ. 2006 ರಲ್ಲಿ ಕಾಯ್ದೆ ಅಂಗೀಕಾರವಾದರೂ ಕಾಯ್ದೆಯ ಪ್ರಕಾರ ಆದಿವಾಸಿಗಳಿಗೆ ಭೂಮಿ ಹಕ್ಕು ಸಿಗುತ್ತಿಲ್ಲ.

ಕಳೆದ ಒಂದೂವರೆ ವರ್ಷಗಳ ಎನ್‍ಡಿಎ ಸರಕಾರದ ಅವಧಿಯಲ್ಲಿಯೂ ಸಂವಿದಾನ ಬದ್ಧವಾದ ಈ ಹಕ್ಕು ಜಾರಿಯಾಗಲಿಲ್ಲ.

ಕರ್ನಾಟಕದ ಬೆಳ್ತಂಗಡಿಯಲ್ಲಿ 1998ರಲ್ಲಿ ಕಾಯ್ದೆ ಜಾರಿಗೆ ಬರುವ ಮುಂಚೆ ಆದಿವಾಸಿಗಳಾದ ರೇವತಿ ಅವರ ಕುಟುಂಬ ಸಾಗುವಳಿ ಮಾಡುತ್ತಿದ್ದ ಭೂಮಿ ಕಬಳಿಸಲು ಬಿಜೆಪಿಯ ಮುಖಂಡರಾದ ಪ್ಲಾಂಟೇಷನ್ ಮಾಲಿಕ ಗೋಪಾಲಗೌಡ ದಾಳಿ ಮಾಡಿ ರೇವತಿ ಅವರ ಕೈಕಡಿದು ಹಾಕಲು ಪ್ರಯತ್ನಿಸಿದ್ದರು. 2006 ರಲ್ಲಿ ಕಾಯ್ದೆ ಅಂಗೀಕಾರವಾದ ಮೇಲೆ ಸಹ ರೇವತಿ ಕುಟುಂಬಕ್ಕೆ ಅವರು ಸಾಗುವಳಿ ಮಾಡುವ ಅರಣ್ಯ ಭೂಮಿ ಹಕ್ಕು ಸಿಗಲಿಲ್ಲ. ಆದರೆ ಅವರ ಜಮೀನು ಕಬಳಿಸಲು ಇದೀಗ 2015 ರಲ್ಲಿ ರೇವತಿ ಅವರ ಪತಿ ಸುಂದರ ಮಲೆಕುಡಿಯರ ಎರಡೂ ಕೈ ಕಡಿದು ಹಾಕಲಾಗಿದೆ. ಕಾಯ್ದೆಯ ಜಾರಿ ಯಾವ  ಸ್ವರೂಪದಲ್ಲಿದೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ ಎಂದು ಬೃಂದಾಕಾರಟ್ ಅವರು ಹೇಳಿದರು.

ಕೇಂದ್ರದಲ್ಲಿ ಮೋದಿಯವರಂತೂ ಬುಡಕಟ್ಟು ಜನರ ವಿರುದ್ಧ ಯುದ್ಧವನ್ನೇ ಸಾರಿದ್ದಾರೆ. ಇದೀಗ ದೇಶದಲ್ಲಿ ಗಣಿಕಾಯ್ದೆಯನ್ನು ಅಂಗೀಕರಿಸಲಾಗಿದೆ. ದೇಶದಲ್ಲಿ ಗಣಿ ಸಂಪತ್ತು ಹೇರಳವಾಗಿರುವ 50 ಜಿಲ್ಲೆಗಳಲ್ಲಿ ಬುಡಕಟ್ಟು ಜನರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಆದರೆ ಬುಡಕಟ್ಟು ಜನರ ಯಾವ ಪ್ರಶ್ನೆಗಳನ್ನೂ ಗಮನಕ್ಕೆ ತೆಗೆದುಕೊಳ್ಳದೇ ಕಾಯ್ದೆ ತರಲಾಗಿದೆ. ಗಣಿಗಾರಿಕೆಗೆ ಅನುಮತಿ ನೀಡುವಾಗ ಬುಡಕಟ್ಟು ಜನರ ಜೊತೆ ಚರ್ಚಿಸಬೇಕೆಂಬ ಅಂಶವನ್ನು ಕಾಯ್ದೆಯಲ್ಲಿ ಕೈಬಿಡಲಾಗಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್‍ಗಳ ಒಪ್ಪಿಗೆ ಇಲ್ಲದೇ ಬಾಕ್ಸೈಟ್ ಗಣಿಗಾರಿಕೆಗೆ ಅಲ್ಲಿನ ಟಿಡಿಪಿ ಸರಕಾರ ಅನುಮತಿ ನೀಡಿತ್ತು. ಆದರೆ ಬುಡಕಟ್ಟು ಜನರು `ಇದು ನಮ್ಮ ಅರಣ್ಯ, ನಮ್ಮ ಅನುಮತಿ ಇಲ್ಲದೇ ನೀವು ಇಲ್ಲಿ ಹೆಜ್ಜೆ ಇಡುವಂತಿಲ್ಲ’ ಎಂದು ಚಳುವಳಿ ಮಾಡಿದ್ದರ ಫಲವಾಗಿ ಆಂಧ್ರ ಸರಕಾರ ಯೋಜನೆಯನ್ನೇ ರದ್ದು ಮಾಡಬೆಕಾಯಿತು. ಬುಡಕಟ್ಟು ಜನತೆ ಆಳುವ ಸರಕಾರಗಳಿಗೆ ಪ್ರಜಾಪ್ರಭುತ್ವ ಎಂದರೇನು ಎಂದು ತೋರಿಸಿಕೊಟ್ಟಿದ್ದಾರೆ ಎಂದು ಬೃಂದಾಕಾರಟ್ ಅವರು ಹೇಳಿದರು.

ದೇಶದ ಶೇ. 8.6 ಜನರು ಆದಿವಾಸಿಗಳಾಗಿದ್ದಾರೆ ಎನ್ನಲಾಗಿದೆ. ಇದು ಒಂದು ಕಡಿಮೆ ಅಂದಾಜು. ಈ ಅಂದಾಜಿನ ಪ್ರಕಾರವೇ ಬುಡಕಟ್ಟು ವಿಶೇಷ ಘಟಕ ಯೋಜನೆ ಪ್ರಕಾರ ಅವರ ಜನಸಂಖ್ಯೆಗೆ ಅನುಗುಣವಾಗಿ ಕೇಂದ್ರ ಸರಕಾರದ ಬಜೆಟ್‍ನಲ್ಲಿ 40,000 ಕೋಟಿ ರೂ.ಗಳು ಸಿಗಬೇಕಿತ್ತು. ಆದರೆ ಸಿಕ್ಕಿರುವುದು ಕೇವಲ 19,000 ರೂ. ಮಾತ್ರ. ಇದರಲ್ಲಿ ಆದಿವಾಸಿ ಮಹಿಳೆಯರಿಗೆ ಸಿಕ್ಕಿರುವುದಂತೂ ಕೇವಲ 40 ಕೋಟಿ ರೂ. ಮಾತ್ರ. ಆದಿವಾಸಿ ವಿದ್ಯಾರ್ಥಿಗಳ ಮಕ್ಕಳಿಗೆ ಸರಿಯಾದ ಹಾಸ್ಟೆಲ್ ಸೌಲಭ್ಯಗಳಿಲ್ಲ. ನಿರುದ್ಯೋಗ ಆದಿವಾಸಿ ಜನರನ್ನು ತೀವ್ರವಾಗಿ ಕಾಡುತ್ತಿದೆ. ಆದರೆ ಸರಕಾರದ ಇಲಾಖೆಗಳಲ್ಲಿ ನೇಮಕಾತಿಗಳನ್ನೇ ನಿಲ್ಲಿಸಲಾಗಿದೆ.

ಇಂತಹ ವಿಷಯಗಳ ಬಗೆಗೆ ಮಾತನಾಡುವ ಆದಿವಾಸಿಗಳನ್ನು ನಕ್ಸಲೈಟ್ ಎಂದು ಬಿಂಬಿಸಿ ದೌರ್ಜನ್ಯ ನಡೆಸಲಾಗುತ್ತಿದೆ. ಆರಣ್ಯ ಪ್ರದೇಶಗಳಲ್ಲಿ ಆದಿವಾಸಿ ಮಹಿಳೆಯರ ಮೇಲೆ ಪೋಲಿಸರಿಂದ ಮತ್ತು ಅರಣ್ಯ ಪಾಲಕರಿಂದ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಈ ಎಲ್ಲ ಸಮಸ್ಯೆಗಳ ವಿರುದ್ಧ ಆದಿವಾಸಿಗಳು ಸಂಘಟಿತರಾಗಿ ಚಳುವಳಿ ನಡೆಸಬೇಕೆಂದು ಬೃಂದಾಕಾರಟ್ ಅವರು ಹೇಳಿದರು.

ಮತ್ತೊಬ್ಬ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಲೇಖಕಿ ಹಾಗೂ ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಅಧ್ಯಕ್ಷರಾದ ಲಲಿತ ನಾಯಕ್‍ರವರು ಬ್ರಿಟೀಷರು ಆದಿವಾಸಿಗಳಿಗೆ ಮೋಸ ಮಾಡಿ ಅವರ ಜಮೀನನ್ನು ಕಿತ್ತುಕೊಂಡು ಶ್ರೀಮಂತರಿಗೆ ನೀಡಿದರು. ರಾಮನಗರದಲ್ಲಿ 5 ಜನ ಆದಿವಾಸಿಗಳ ಮೇಲೆ ಅತ್ಯಾಚಾರ ನಡೆಸಿ ಮೂವರನ್ನು ಕೊಂದು ಹಾಕಿದ ಅಮಾನವಿಯ ಘಟನೆ ನಡೆದಿದೆ. ಆದರೆ ಈ ಬಗೆಗೆ ಸರಿಯಾದ ಕಾನೂನು ಕ್ರಮ ಜರುಗಿಲ್ಲ. ಲಾಠಿ ಇದ್ದವರು, ಆದಿವಾಸಿಗಳ ನೆಲೆಯಾದ ಅರಣ್ಯ ನಾಶವಾಗುತ್ತ್ತಿದೆ. ಲಾಠಿ ಹಿಡಿದವರು, ಉಳ್ಳವರು ಜಮೀನು ಕಬಳಿಸುತ್ತಿದ್ದಾರೆ. ಈ ದೌರ್ಜನ್ಯಗಳ ವಿರುದ್ದ ಹೊರಾಡಬೇಕು ಎಂದು ಕರೆ ನೀಡಿದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ಎಸ್. ವರಲಕ್ಷಿಯವರು, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಅಧ್ಯಕ್ಷರಾದ ನಿತ್ಯಾನಂದ ಸ್ವಾಮಿಯವರು ವೇದಿಕೆಯಲ್ಲಿದ್ದರು. ಆರಂಭದಲ್ಲಿ ಸಂಘಟನೆಯ ರಾಜ್ಯ ಸಂಚಾಲಕರಾದ ವೈ.ಕೆ. ಗಣೇಶ್‍ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬೃಂದಾಕಾರಟ್‍ರವರ ಭಾಷಣವನ್ನು ಕೆ. ಪ್ರಕಾಶ್‍ರವರು ಕನ್ನಡಕ್ಕೆ ಅನುವಾದಿಸಿದರು.

ಮಧ್ಯಾಹ್ನದ ನಂತರದ ಪ್ರತಿನಿಧಿ ಅಧಿವೇಶನದಲ್ಲಿ ಕರ್ನಾಟಕ ಪ್ರಾಂತರೈತ ಸಂಘದ ರಾಜ್ಯ ಅಧ್ಯಕ್ಷರಾದ ನಿತ್ಯಾನಂದ ಸ್ವಾಮಿಯವರು `ಭಾರತದಲ್ಲಿ ಆದಿವಾಸಿ ಸಮುದಾಯಗಳ ಆಂದೋಲನಗಳು’ ಎಂಬ ವಿಷಯದ ಕುರಿತು ಉಪನ್ಯಾಸ  ನೀಡಿದರು.

ಕರ್ನಾಟಕ ರಾಜ್ಯ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕರಾದ ಕೊಡಗಿನ ವೈ.ಕೆ. ಗಣೇಶ್, ಸಹ ಸಂಚಾಲಕರಾದ ದಕ್ಷಿಣ ಕನ್ನಡಜಿಲ್ಲೆಯ ವಿಠಲ ಮಲೆಕುಡಿಯ, ಉಡುಪಿ ಜಿಲ್ಲೆಯ ಶ್ರೀಧರ ಕೊರಗ, ಕರ್ನಾಟಕ ರಾಜ್ಯ ದಲಿತ ಹಕ್ಕುಗಳ ಸಮಿತಿಯ ಮುಖಂಡರಾದ ಕೃಷ್ಣಪ್ಪಕೊಂಚಾಡಿ ಸೇರಿದಂತೆ ಕೊಡಗು, ದಕ್ಷಿಣಕನ್ನಡ, ಹಾಸನ, ಚಿಕ್ಕಬಳ್ಳಾಪುರ ಮುಂತಾದ ನಾನಾ ಜಿಲ್ಲೆಗಳಿಂದ ಬಂದ ಆದಿವಾಸಿಗಳ ಪರವಾಗಿ ಹಲವಾರು ಪ್ರತಿನಿಧಿಗಳು ಸಮಾವೇಶದಲ್ಲಿ ಆದಿವಾಸಿಗಳು ಅನುಭವಿಸುತ್ತಿರುವ ನೋವಿನ ಕುರಿತು ಮಾತನಾಡಿದರು. ತಮ್ಮ ದಿಟ್ಟ ಹೋರಾಟಗಳ ವಿವರಗಳನ್ನು ನೀಡಿದರು.  ಸಮಾವೇಶವುರಾಜ್ಯಾದ್ಯಂತ ಆದಿವಾಸಿಗಳನ್ನು ಸಂಘಟಿಸಿ, ಅವರ ಬದುಕಿನ ಜ್ವಲಂತ ಸಮಸ್ಯೆಗಳ ಆಧಾರದಲ್ಲಿ ಚಳುವಳಿಯನ್ನು ತೀವ್ರಗೊಳಿಸುವ ಸಾಮೂಹಿಕ ನಿರ್ಧಾರವನ್ನು ಕೈಗೊಂಡಿತು.

ಕೊನೆಯಲ್ಲಿ ಸಿಐಟಿಯು ಸಂಘಟನೆಯ ಅಖಿಲ ಭಾರತ ಕಾರ್ಯದರ್ಶಿ, ಎಸ್. ವರಲಕ್ಷ್ಮಿಯವರು ಸಮಾರೋಪದ ಮಾತುಗಳನ್ನಾಡಿ ಕೇಂದ್ರ ಮತ್ತುರಾಜ್ಯ ಸರಕಾರಗಳು ಭರದಿಂದಜಾರಿ ಮಾಡುತ್ತಿರುವ ಆರ್ಥಿಕ ನೀತಿಗಳು ಎಷ್ಟು ನಿರ್ಧಯವಾಗಿವೆ ಎಂದು ವಿವರಿಸಿದರು. ಆಳುವ ಸರಕಾರಗಳ ಬಂಡವಾಳಶಾಹಿಗಳ, ಶ್ರೀಮಂತರ ಪರವಾದ ಲೂಟಿಕೋರ ನೀತಿಗಳಿಗೆ ಎದುರಾಗುವ ಪ್ರತಿರೋಧವನ್ನು ತಪ್ಪಿಸಲು ಜಾತಿ, ಮತಗಳ ಹೆಸರಿನಲ್ಲಿ ಜನರನ್ನು ಮತ್ತು ಆದಿವಾಸಿಗಳ ಒಗ್ಗಟ್ಟನ್ನು ಒಡೆಯಲಾಗುತ್ತಿದೆ. ಹಿಂದುತ್ವವಾದಿ  ಸಂಘ ಪರಿವಾರದ ಶಕ್ತಿಗಳು ನಿರಂತರವಾಗಿ ಈ ಕೆಲಸದಲ್ಲಿ ತೊಡಗಿದ್ದು ಆದಿವಾಸಿಗಳು ಎಚ್ಚರದಲ್ಲಿದ್ದು ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು. ಹಾಗೂ ಜನಸಮುದಾಯಗಳ ವಿಶಾಲ ಹೋರಾಟದಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಬೆಳ್ತಂಗಡಿಯ ನೆರಿಯ ಗ್ರಾಮದ ಪ್ಲಾಂಟರ್ ಗೋಪಾಲಗೌಡನಿಂದ ಹಲ್ಲೆಗೆ ಗುರಿಯಾಗಿಯೂ ದಿಟ್ಟವಾಗಿ ಹೋರಾಟ ಮುಂದುವರಿಸಿರುವ ರೇವತಿ (ಗೋಪಾಲಗೌಡ ಈಗ ಎರಡೂ ಕೈಕತ್ತರಿಸಿರುವ ಸುಂದರ ಮಲೆಕುಡಿಯರ ಪತ್ನಿ.) ಅವರು ಸಮಾವೇಶದಲ್ಲಿ ಪಾಲ್ಗೊಂಡು ಸಮಾವೇಶಕ್ಕೆ ಸ್ಪೂರ್ತಿತುಂಬಿದರು.

Comments

test12358