ನ.05ರಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

ಸಂಪುಟ: 
9
ಸಂಚಿಕೆ: 
45
Friday, 4 December 2015

ದಲಿತರ ಮೇಲಿನ ದೌರ್ಜನ್ಯಗಳು, ರೈತರ ಆತ್ಮಹತ್ಯೆಗಳು, ಬರಗಾಲ, ನೀರಾವರಿ ಪ್ರಶ್ನೆ, ಬೀಡಿ ಕಾರ್ಮಿಕರ ಪ್ರಶ್ನೆ ಮುಂತಾದ ಕೆಲವು ತುರ್ತು ಪ್ರಶ್ನೆಗಳನ್ನು ಚರ್ಚಿಸಲು ಸಮಯ ನೀಡಬೇಕೆಂದು

ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಿಪಿಐ(ಎಂ) ರಾಜ್ಯ ಸಮಿತಿ ಪರವಾಗಿ ಪತ್ರ ಬರೆದು ಸುಮಾರು ಒಂದು ತಿಂಗಳು ಕಳೆದರೂ ಇದುವರೆಗೂ ಮುಖ್ಯಮಂತ್ರಿ ಸ್ಪಂದಿಸದಿರುವುದನ್ನು ಖಂಡಿಸಿ ನವೆಂಬರ್ 5ರಂದು ಗುರುವಾರ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ ಅಂದು ಮುಖ್ಯಮಂತ್ರಿ ಮನೆಯ ಮುಂದೆ ಪ್ರತಿಭಟನೆ ಇರುತ್ತದೆ. ಬೇಡಿಕೆಗಳು ಈ ಕೆಳಗಿನಂತೆ ಇವೆ:

  1. ಮಹದಾಯಿ ನದಿ ನೀರಿನ ವಿಷಯದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ಎಲ್ಲ ರಾಜಕೀಯ ಪಕ್ಷಗಳನ್ನು ಮತ್ತು ಹೋರಾಟ ನಿರತ ಸಂಘಟನೆಗಳನ್ನು ಒಟ್ಟಾಗಿಸಿ ಪ್ರಧಾನ ಮಂತ್ರಿಯವರ ಮಧ್ಯಸ್ಥಿಕೆಗೆ ಒತ್ತಾಯಿಸಬೇಕು.

  2. ನಿರಂತರ ಬರಪೀಡಿತ ಬಯಲು ಸೀಮೆಯ ರೈತರ ಭೂಮಿಗೆ ನೀರಾವರಿ ಮತ್ತು ಕುಡಿಯುವ ನೀರು ಒದಗಿಸಲು ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಮಾಡಬೇಕು.

  3. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುವ ದಕ್ಷಿಣ ಕನ್ನಡ ಜಿಲ್ಲೆಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆಯನ್ನು ರೂಪಿಸಿ ಜಾರಿಮಾಡಬೇಕು.

  4. ಸಣ್ಣ ಮತ್ತು ಮಧ್ಯಮ ರೈತರ ಎಲ್ಲ ಸಾಂಸ್ಥಿಕ ಹಾಗೂ ಖಾಸಗಿ ಸಾಲವನ್ನು ಇದೊಂದು ಬಾರಿ ಸರ್ಕಾರವೇ ವಹಿಸಿಕೊಂಡು ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಬೇಕು.

  5. ಅನಾವೃಷ್ಠಿ ಮತ್ತು ಇತ್ತೀಚಿನ ಅತಿವೃಷ್ಠಿಯಿಂದ ಬೆಳೆಹಾನಿ ಅನುಭವಿಸಿದ ಎಲ್ಲ ರೈತರಿಗೆ ಎಕರೆಗೆ ರೂ. 10 ಸಾವಿರದಂತೆ ಪರಿಹಾರ ನೀಡಬೇಕು.

  6. ಭೀಕರ ಬರದ ಹಿನ್ನೆಲೆಯಲ್ಲಿ ಗ್ರಾಮೀಣ ಕೆಲಸಗಾರರಿಗೆ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಒಂದು ಕುಟುಂಬಕ್ಕೆ 100 ದಿನಗಳ ಬದಲು 200 ದಿನಗಳ ಕೆಲಸವನ್ನು ಒದಗಿಸಿ ಯೋಜನೆಯನ್ನು ಭ್ರಷ್ಟಾಚಾರ ಮುಕ್ತವಾಗಿ ಜಾರಿಗೊಳಿಸಲು ದೃಢವಾದ ಕ್ರಮಗಳನ್ನು ಕೈಗೊಳ್ಳಬೇಕು.

  7. ಬೆಲೆ ಏರಿಕೆ, ಬರಗಾಲದ ಹಿನ್ನಲೆಯಲ್ಲಿ ವ್ಯಕ್ತಿಗೆ ತಿಂಗಳಿಗೆ ಉಚಿತವಾಗಿ 5ಕೆ.ಜಿ ಅಕ್ಕಿ ನೀಡುವ ಪದ್ಧತಿಯನ್ನು ಕೈಬಿಟ್ಟು ಬಿಪಿಎಲ್ ಕಾರ್ಡುದಾರ ಕುಟುಂಬಕ್ಕೆ ಮೊದಲಿನಂತೆ ಕೆ.ಜಿ.ಗೆ 1ರೂ. ದರದಲ್ಲಿ 30 ಕೆ.ಜಿ ಅಕ್ಕಿ ಕೊಡುವ ಯೋಜನೆಯನ್ನು ಪುನರಾಂಭಿಸಬೇಕು.

  8. ಸರ್ಕಾರಿ/ಅರಣ್ಯ ಭೂಮಿಯಲ್ಲಿ ಬೇಸಾಯ ಮಾಡಿ ಜೀವನ ಸಾಗಿಸಲು ಪ್ರಯತ್ನಿಸುತ್ತಿರುವ ಬಡವರನ್ನು ಒಕ್ಕಲೆಬ್ಬಿಸುವುದನ್ನು ನಿಲ್ಲಿಸಿ ಅಂತಹ ಪ್ರಕರಣಗಳನ್ನು ಸಕ್ರಮಗೊಳಿಸಬೇಕು.

  9. ಸ್ವಂತ ಮನೆ/ನಿವೇಶನ ಇಲ್ಲದ ಬಡವರು ಮನೆ ನಿವೇಶನಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ಅರ್ಹರನ್ನು ಗುರುತಿಸಿ ಅವರಿಗೆ ನಿವೇಶನಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ನಿವೇಶನಗಳಿಗಾಗಿ ಖಾಸಗಿ ಭೂಮಿಯನ್ನು ಖರೀದಿಸಲು 2013ರ ಕಾಯ್ದೆಗೆ ಅನುಗುಣವಾಗಿ 4 ಪಟ್ಟು ಹಣ ನೀಡಲು ಮುಂದಾಗಬೇಕು.

  10. ಕೊಪ್ಪಳ ಜಿಲ್ಲೆ ಮರಕುಂಬಿಯ ದಲಿತ ದೊಡ್ಡ ವಿರೇಶನ ಹತ್ಯೆ ಕುರಿತಾದ ತನಿಖೆಯನ್ನು ನ್ಯಾಯಾಲಯದ ಉಸ್ತುವಾರಿಯಲ್ಲಿ ನಡೆಸಿ ಅಪರಾಧಿಯನ್ನು ತ್ವರಿತವಾಗಿ ಪತ್ತೆಹಚ್ಚಬೇಕು. ದೊಡ್ಡ ವಿರೇಶನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ, ಅವರ ಮಕ್ಕಳಲ್ಲಿ ಒಬ್ಬನಿಗೆ ಸರ್ಕಾರಿ ನೌಕರಿ ನೀಡಬೇಕು. ಮರಕುಂಬಿ ಗ್ರಾಮದ ದಲಿತ ಕುಟುಂಬಗಳಿಗೆ ಮನೆ ನಿವೇಶನಗಳನ್ನು ವಿತರಿಸಲು ಅಗತ್ಯ ಖಾಸಗಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬೇಕು.

  11. ಚಾಮರಾಜನಗರ ಜಿಲ್ಲೆಯಲ್ಲಿ ದಲಿತ ಕೂಲಿಕಾರರ ಹತ್ಯೆ ಪ್ರಕರಣದ ತನಿಖೆಯನ್ನು ನ್ಯಾಯಾಲಯದ ಉಸ್ತುವಾರಿಯಲ್ಲಿ ನಡೆಸಿ ಅಪರಾಧಿಗಳನ್ನು ಕೂಡಲೇ ಪತ್ತೆಹಚ್ಚಬೇಕು.

  12. ಸಮುದಾಯ ಭವನ ಪ್ರವೇಶಕ್ಕೆ ಅಡ್ಡಿಪಡಿಸುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

  13. ಬೀಡಿ ಕಾರ್ಮಿಕರಿಗೆ ಕೊಡಬೇಕಾದ ತುಟ್ಟಿಭತ್ಯೆಯನ್ನು ತಡೆಹಿಡಿದಿರುವ ಅನ್ಯಾಯದ ಕ್ರಮವನ್ನು ಕೂಡಲೇ ಕೈಬಿಟ್ಟು ಏಪ್ರಿಲ್ 2015ರಿಂದ ಬಾಕಿ ಇರುವ ತುಟ್ಟಿಭತ್ಯೆಯನ್ನು ಸಂದಾಯ ಮಾಡುವಂತೆ ಬೀಡಿ ಮಾಲೀಕರಿಗೆ ಆದೇಶ ನೀಡಬೇಕು. ಬೀಡಿ ಕಾರ್ಮಿಕರ ಕನಿಷ್ಠ ವೇತನವನ್ನು ಕಡಿತ ಮಾಡುವ ದುರಾಲೋಚನೆಯನ್ನು ಕೈಬಿಡಬೇಕು.

  14. ‘ಎಸ್ಮಾ’ ಕರಾಳ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು. ರಸ್ತೆ ಸಾರಿಗೆ ನೌಕರರಿಗೆ ‘ಎಸ್ಮಾ’ ಅನ್ವಯ ಮಾಡಿರುವ ಕ್ರಮವನ್ನು ಕೈಬಿಡಬೇಕು. ರಸ್ತೆ ಸಾರಿಗೆ ನೌಕರರ ವೇತನ ಪರಿಷ್ಕರಣೆಯನ್ನು ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸಿ ಒಪ್ಪಂದ ಮಾಡಿಕೊಳ್ಳಬೇಕು.

  15. ಭೂ ಸುಧಾರಣಾ ಕಾಯ್ದೆಯ ಮೂಲ ಉದ್ದೇಶಕ್ಕೆ ಚ್ಯುತಿ ತರುವ ತಿದ್ದುಪಡಿಯನ್ನು ಕೈಬಿಡಬೇಕು.

  16. ಅತ್ಯಾಚಾರ ಆರೋಪಕ್ಕೆ ಒಳಗಾಗಿರುವ ರಾಮಚಂದ್ರಾಪುರ ಮಠದ ರಾಘವೇಶ್ವರರನ್ನು, ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಿ ಕೂಡಲೇ ಬಂಧಿಸಿ ಆತ ಮತ್ತು ಆತನ ಬೆಂಬಲಿಗರು ಸಾಕ್ಷಿ ನಾಶಮಾಡುವುದನ್ನು ತಡೆಗಟ್ಟಬೇಕು.

  17. ಇತ್ತೀಚೆಗೆ ಬೆಳಗಾವಿ ಮತ್ತು ಮುಧೋಳ್ ನಗರಗಳಲ್ಲಿ ನಡೆದ ಕೋಮು ಗಲಭೆಗಳಲ್ಲಿ ಸಂತೃಸ್ತರಾದವರಿಗೆ ಗರಿಷ್ಠ ಪರಿಹಾರ ನೀಡಬೇಕು. ಗಲಭೆಗೆ ಕಾರಣರಾದವರನ್ನು ಬಂಧಿಸಿ ಕ್ರಮ ಜರುಗಿಸಬೇಕು.

  18. ಡಾ. ಎಂ.ಎಂ. ಕಲ್ಬುರ್ಗಿ ಹಂತಕರನ್ನು ಪತ್ತೆ ಹಚ್ಚುವ ಕೆಲಸವನ್ನು ಚುರುಕುಗೊಳಿಸಬೇಕು. ಮೌಢ್ಯ ಪ್ರತಿಬಂಧಕಾ ಮಸೂದೆಯನ್ನು ಕೂಡಲೇ ಅಂಗೀಕರಿಸಬೇಕು.

  19. ಮೇಲಿನ ಪ್ರಶ್ನೆಗಳನ್ನು ಚರ್ಚಿಸಲು ಮುಖ್ಯ ಮಂತ್ರಿಗಳು ಕೂಡಲೇ ಸಿಪಿಐ(ಎಂ) ನಿಯೋಗವನ್ನು ಆಮಂತ್ರಿಸಬೇಕು.