ಕೇರಳ ಭವನದ ಮೇಲೆ ದಿಲ್ಲಿ ಪೊಲೀಸ್ ದಾಳಿ

ಸಂಪುಟ: 
9
ಸಂಚಿಕೆ: 
45
Sunday, 1 November 2015

kerala-house-police_

ನೈತಿಕ ಪೋಲಿಸ್ ಗಿರಿ’ಯನ್ನು ಶಿಕ್ಷಿಸಿ - ಸಿಪಿಐ(ಎಂ) ಪೊಲಿಟ್ ಬ್ಯುರೊ

ಗೋಮಾಂಸ-ವಿರೋಧಿ ಪುಂಡಾಟ ಈಗ ದೇಶದ ರಾಜಧಾನಿಯಲ್ಲೇ, ಕೇಂದ್ರ ಗೃಹ ಮಂತ್ರಿಗಳ ಮೂಗಿನ ಕೆಳಗೇ ಆರಂಭವಾಗಿದೆ. ಹಿಂದೂ ಸೇನೆ ಎಂಬುದರ ಯಾರೋ ಒಬ್ಬ ದಿಲ್ಲಿಯಲ್ಲಿರುವ ಕೇರಳ ಸರಕಾರದ ‘ಕೇರಳ ಭವನ’ದ ಕ್ಯಾಂಟೀನ್ನಲ್ಲಿ ನಿಷೇಧಿತ ಗೋಮಾಂಸ ಮಾರಲಾಗುತ್ತಿದೆ ಎಂಬ ಮಾಹಿತಿ ಕೊಟ್ಟನೆಂದು ದಿಲ್ಲಿ ಪೊಲೀಸ್ ತಕ್ಷಣ ಅದನ್ನು ಪರೀಕ್ಷಿಸುವ ನೆಪದಲ್ಲಿ ಅಲ್ಲಿ ದಾಳಿ ನಡೆಸಿದೆ. ಆದರೆ ಅಲ್ಲಿ ಮಾರುತ್ತಿದ್ದುದು ದಿಲ್ಲಿಯಲ್ಲೂ ನಿಷೇಧಿತವಲ್ಲದ ಎಮ್ಮೆ ಮಾಂಸ ಎಂದು ತಿಳಿದು ಪೆಚ್ಚಾಗಿ ತನ್ನ ದಾಳಿಯನ್ನು ಮರೆಮಾಚಲು ಏನೇನೋ ಸಮರ್ಥನೆಗಳನ್ನು ಕೊಟ್ಟಿದೆ. ವ್ಯಾಪಕ ಪ್ರತಿಭಟನೆಯ ನಂತರ ಈಗ ಈ ಸುಳ್ಳು ಮಾಹಿತಿ ನೀಡಿದ ‘ಹಿಂದೂ ಸೇನೆ’ ಎಂಬುದರ ಮುಖ್ಯಸ್ಥನೆನಿಸಿರುವ ವಿಷ್ಣು ಗುಪ್ರ ಎಂಬಾತನನ್ನು ಬಂಧಿಸಲಾಗಿದೆ ಎಂದು ದಿಲ್ಲಿ ಪೊಲೀಸ್ ಹೇಳಿದೆ.

ಈ ರೀತಿ ಹಿಂದುತ್ವ ಮಂದಿ ಗೋಮಾಂಸದ ಹೆಸರಿನಲ್ಲಿ ದೇಶದ ರಾಜಧಾನಿಯಲ್ಲೇ ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೋ ಬಲವಾಗಿ ಖಂಡಿಸಿದೆ.

ನೇರವಾಗಿ ಕೇಂದ್ರ ಗೃಹಮಂತ್ರಿಗಳ ಅಡಿಯಲ್ಲಿ ರುವ ದಿಲ್ಲಿ ಪೊಲೀಸ್ ಮಾಡಿರುವ ದಾಳಿ ಕಾನೂನು ಬಾಹಿರ. ದೇಶದ ವಿವಿಧೆಡೆಗಳಲ್ಲಿ ಗೋಮಾಂಸ ಸೇವನೆಯ ವಿರುದ್ಧ ಆರೆಸ್ಸೆಸ್ ನವರು ಮೋದಿ ನೇತೃತ್ವದ ಕೇಂದ್ರ ಸರಕಾರದ ಕೃಪಾಪೋಷಣೆಯಿಂದ ನಡೆಸಿರುವ ಅಪಪ್ರಚಾರದ ಹಿನ್ನೆಲೆಯಲ್ಲಿ ದಿಲ್ಲಿ ಪೋಲೀಸರ ಈ ಕಾನೂನು ಬಾಹಿರ ಕೃತ್ಯ ನಡೆದಿದೆ. ಇದು ದೇಶಾದ್ಯಂತ ಕೋಮುಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ಒಂದು ನೆಪವಷ್ಟೇ, ಆ ಮೂಲಕ ಬಿಜೆಪಿ ಇದರ ರಾಜಕೀಯ ಮತ್ತು ಚುನಾವಣಾ ಲಾಭ ಗಿಟ್ಟಿಸುವ ಹುನ್ನಾರ ನಡೆಸಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.

ಕೇರಳ ರಾಜ್ಯ ಸರಕಾರ ಆರಂಭದಲ್ಲಿ ಈ ಕಾನೂನುಬಾಹಿರ ಒತ್ತಡಕ್ಕೆ ಮಣಿದಂತೆ ಕಾಣುತ್ತದೆ. ಏಕೆಂದರೆ ಕ್ಯಾಂಟೀನಿನಿಂದ ಎಮ್ಮೆ ಮಾಂಸದ ಮಾರಾಟವನ್ನು ಹಿಂತೆಗೆದುಕೊಂಡಿತು. ಇದು ಅತ್ಯಂತ ಖಂಡನೀಯ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ. ನಂತರ ವ್ಯಾಪಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅದರ ಮಾರಾಟವನ್ನು ಮತ್ತೆ ಆರಂಭಿಸಲಾಯಿತು.

ದಿಲ್ಲಿ ಪೊಲೀಸರ ಈ ಕೃತ್ಯ ಭಾರತೀಯ ಸಂವಿಧಾನದ ಒಕ್ಕೂಟ ರಚನೆಯ ಒಂದು ಸ್ಪಷ್ಟ ಉಲ್ಲಂಘನೆ ಕೂಡ. ಇದು ರಾಷ್ಟ್ರೀಯ ರಾಜಧಾನಿಯಲ್ಲಿ ರಾಜ್ಯ ಸರಕಾರಗಳು ತಮ್ಮ ಆಸ್ತಿಗಳ ಮೇಲೆ ಹೊಂದಿರುವ ಹಕ್ಕುಗಳ ಉಲ್ಲಂಘನೆಯಾಗಿದೆ. ದಿಲ್ಲಿ ಪೊಲೀಸರ ಈ ಕೃತ್ಯವನ್ನು ಒಪ್ಪಲು ಸಾಧ್ಯವಿಲ್ಲ. ದಿಲ್ಲಿ ಸರಕಾರ ಈ ಘಟನೆಯ ಬಗ್ಗೆ ಒಂದು ಸರಿಯಾದ ವಿಚಾರಣೆ ನಡೆಸಿ, ಇದಕ್ಕೆ ಹೊಣೆಗಾರರಾದವರ ಮೇಲೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.

ಸಂಘ ಪರಿವಾರದ ಅಜೆಂಡಾದ ಜಾರಿ

ಇದಕ್ಕೆ ಮೊದಲು ಈ ಕೃತ್ಯವನ್ನು ಬಲವಾಗಿ ಖಂಡಿಸಿದ ಸಿಪಿಐ(ಎಂ) ಪೊಲಿಟ್ಬ್ಯುರೊ ಸದಸ್ಯರೂ, ಕೇರಳದ ಮುಖಂಡರೂ ಆದ ಪಿಣರಾಯಿ ವಿಜಯನ್ ಇದು ಎಲ್ಲರೂ ಗಮನಿಸಬೇಕಾದ ಒಂದು ಎಚ್ಚರಿಕೆ ಎಂದಿದ್ದಾರೆ. ಯಾರೋ ಧರ್ಮಾಂಧರ ಆರೋಪದ ಮೇಲೆ ಕೇರಳ ಭವನದೊಳಕ್ಕೆ ದಿಲ್ಲಿ ಪೋಲೀಸರ ಈ ಕಾನೂನುಬಾಹಿರ ಪ್ರವೇಶ ‘ಸಂಘ ಪರಿವಾರ’ದ ಅಜೆಂಡಾದ ಜಾರಿಯಲ್ಲದೆ ಬೇರೇನೂ ಅಲ್ಲ ಎಂದಿರುವ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮಲೆಯಾಳಿಗಳು ಏನು ತಿನ್ನಬೇಕು, ಎನು ತಿನ್ನಬಾರದು ಎಂದು ನಿರ್ದೇಶಿಸಲು ಹೊರಟಿದೆ ಎಂದು ಟೀಕಿಸಿದ್ದಾರೆ.

ಈ ಘಟನೆಯ ಮೂಲಕ ಮಹಮ್ಮದ್ ಅಖ್ಲಾಕನ್ನು ಬಡಿದು ಸಾಯಿಸಿದಂತೆ ಈ ಮಂದಿ ಯಾವ ಅಡುಗೆ ಕೋಣೆಗೂ ನುಗ್ಗಿ ಏನು ಬೇಕಾದರೂ ಮಾಡಬಹುದು ಎಂಬ ಸಂದೇಶ ನೀಡಲು ಪ್ರಯತ್ನಿಸಿದ್ದಾರೆ. ನಮ್ಮ ಅಡುಗೆ ಕೋಣೆಯನ್ನು ಕೂಡ ಕದಡಿಸುವ ಈ ಪ್ರಯತ್ನವನ್ನು ನಮ್ಮೆಲ್ಲ ಶಕ್ತಿಯನ್ನು ಬಳಸಿ ವಿಫಲಗೊಳಿಸಬೇಕು, ನಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.