ಕಾಮ್ರೇಡ್ ದಸ್ತಗೀರ್ ಲಾಲ್ ಸಲಾಂ

ಸಂಪುಟ: 
9
ಸಂಚಿಕೆ: 
48
Sunday, 22 November 2015

Dastagir

ಕೆಲಸ ಹುಡುಕಿಕೊಂಡು ಹೋದ ಮುಂಬೈಯಲ್ಲಿ ಕಮ್ಯುನಿಸ್ಟರಾಗಿ ಕರ್ನಾಟಕದಲ್ಲಿನ ತಮ್ಮ ಊರುಗಳಿಗೆ ಮರಳಿ ಪಕ್ಷವನ್ನು ಕಟ್ಟಿ ಬೆಳೆಸಿದ ಮುಖಂಡರಲ್ಲಿ ಕೊನೆಯವರಾದ ಕಾಮ್ರೇಡ್ ಮಹಮ್ಮದ್ ದಸ್ತಗೀರ್‍ರವರ ಕೊಡುಗೆಗಳನ್ನು ರಾಜ್ಯದ ಹಿರಿಯ ಕಮ್ಯುನಿಸ್ಟ್ ಮುಖಂಡ ವಿ.ಜೆ.ಕೆ. ನಾಯರ್ ಈ ಲೇಖನದಲ್ಲಿ ನೆನಪಿಸಿಕೊಳ್ಳುತ್ತಾರೆ.

ಕಾಮ್ರೇಡ್ ಮಹಮ್ಮದ್ ದಸ್ತಗೀರ್, ರಾಜ್ಯದ ಒಬ್ಬ ಹಿರಿಯ ಕಮ್ಯುನಿಸ್ಟ್ ಮುಖಂಡರು ನವಂಬರ್ 13, 2015ರಂದು ನಿಧನರಾಗಿದ್ದಾರೆ. ಅವರಿಗೆ 91 ವರ್ಷವಾಗಿತ್ತು. ತುಮಕೂರು ಜಿಲ್ಲೆ ಅವರ ಮುಖ್ಯ ಕಾರ್ಯಕ್ಷೇತ್ರವಾಗಿತ್ತು. ಕಳೆದ ಎರಡು ದಶಕಗಳಿಂದ ದೇಹದೊಳಗೆ ಪೇಸ್ ಮೇಕರ್‍ನೊಂದಿಗೇ ಅವರು ತಮ್ಮ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದರು.

ತುಮಕೂರು ಜಿಲ್ಲೆಯಲ್ಲಿ ಕಾರ್ಮಿಕ ವರ್ಗದ ಪಕ್ಷವನ್ನು ಕಟ್ಟುವಲ್ಲಿ ಅವರ ಕೊಡುಗೆಗಳನ್ನು ಜಿಲ್ಲೆಯ ಕಮ್ಯುನಿಸ್ಟ್ ಆಂದೋಲನ ಎಂದೂ ಮರೆಯಲು ಸಾಧ್ಯವಿಲ್ಲ. ಕುಣಿಗಲ್ ತಾಲೂಕಿನಲ್ಲಿ ಅವರ ಕೆಲಸ ಫಲ ನೀಡಿತ್ತು. 1968ರಲ್ಲಿ ಈ ಲೇಖಕ ಕಮ್ಯುನಿಸ್ಟ್ ಪಕ್ಷ ಸೇರಿದಾಗ ಕಾಂ.ದಸ್ತಗೀರ್ ತುಮಕೂರು ಜಿಲ್ಲೆಯ ಇನ್ನಿಬ್ಬರು ಹಿರಿಯರಾದ ಹಗಲವಾಡಿ ಚೆನ್ನಪ್ಪ ಮತ್ತು ಕೆ.ಆರ್‍.ನಾಯಕ್ ಅವರೊಂದಿಗೆ ಪಕ್ಷದ ರಾಜ್ಯ ಸಮಿತಿ ಸದಸ್ಯರಾಗಿದ್ದರು.

ಕುಣಿಗಲ್‍ನಲ್ಲಿ ಆಗಲೇ ಒಂದು ಪಕ್ಷದ ಕಚೇರಿ ಇತ್ತು. ಕಾಮ್ರೇಡ್ ಬಡೇ ಸಾಬ್ ಆಗ ಪುರಸಭೆಯ ಅಧ್ಯಕ್ಷರಾಗಿ ಚುನಾಯಿತರಾಗುತ್ತಿದ್ದರು. ಅವು ಕಮ್ಯುನಿಸ್ಟರು ಪ್ರಧಾನ ಪ್ರತಿಪಕ್ಷವಾಗಿದ್ದ ದಿನಗಳು. ಜನತಾ ಪಕ್ಷ ಕೂಡ ಹುಟ್ಟಿದ್ದು ಒಂದು ದಶಕದ ನಂತರವೇ. ಭಾಜಪದ ಪ್ರವೇಶವಂತೂ ಬಹಳ ತಡವಾಗಿ ಬಂತು. ನಿಜ, ಅದರ ಹಿಂದಿನ ಅವತಾರವಾದ ಭಾರತೀಯ ಜನಸಂಘ ಆಗ ತುಮಕೂರಿನಲ್ಲಿ ಕೆಲಸ ಮಾಡುತ್ತಿತ್ತು, ಏಕೆಂದರೆ ಆರೆಸ್ಸೆಸ್ ಆ ದಿನಗಳಲ್ಲಿ ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ ಇತ್ತು.

ಮುಂಬೈಗೆ ಕೆಲಸ ಹುಡುಕಿಕೊಂಡು ಹೋಗಿದ್ದ ಕಾಮ್ರೇಡ್ ದಸ್ತಗೀರ್ ಆಗ ಕುಣಿಗಲ್‍ಗೆ ಹಿಂದಿರುಗಿದ್ದರು. ಮುಂಬೈ ಆಗ ಭಾರತದ ಕಮ್ಯುನಿಸ್ಟರ ಕೇಂದ್ರವಾಗಿತ್ತು. ನಮ್ಮ ಪಕ್ಷದ ಕಾಮ್ರೇಡ್ ಎನ್.ಎಲ್.ಉಪಾಧ್ಯಾಯ, ಅವರ ಕಿರಿಯ ಸೋದರ ಎನ್.ಕೆ.ಉಪಾಧ್ಯಾಯ, ಕಾಮ್ರೇಡ್ ದಸ್ತಗೀರ್, ಕಾಮ್ರೇಡ್ ಕೆ.ಆರ್.ನಾಯಕ್ ಮುಂತಾದವರು ಕಮ್ಯುನಿಸ್ಟರಾದುದು ಅಲ್ಲಿಯೇ. ಮುಂಬೈಯಲ್ಲಿದ್ದಾಗ ಕರ್ನಾಟಕದ ಬೇರೆ ಕೆಲವು ಮುಖಂಡರೂ ಕಮ್ಯುನಿಸ್ಟರಾದರು. ಅವರಲ್ಲಿ ದಾಡೇಲಿಯಲ್ಲಿ ಕೆ.ಎನ್.ಸಿಂಗ್ ಹೆಸರಲ್ಲಿ ಇದ್ದ ದೌಝಾಸ ನನಗೆ ನೆನಪಾಗುತ್ತಾರೆ. ಅವರು ಅಲ್ಲಿ ಕಮ್ಯುನಿಸ್ಟ್ ಆಂದೋಲನದ ಬುನಾದಿ ಹಾಕಿದರು. ಬಾಗಲಕೋಟೆಯ ಕಾಮ್ರೇಡ್ ಖಲಾಸಿ ಇನ್ನೊಬ್ಬರು. ಅವರು ಕಾಮ್ರೇಡ್ ಗೋವಿಂದ ಪಿಳ್ಳೆಯವರೊಂದಿಗೆ ಯರವಡಾ ಜೈಲಿನಲ್ಲಿದ್ದರು. ಕಾಮ್ರೇಡ್ ಸ್ಥಳೇಕರ್ ಕೂಡ ಮುಂಬೈಯಲ್ಲಿ ಕಮ್ಯುನಿಸ್ಟರಾದವರು. ಆದರೆ ಇದು ಅರವತ್ರ ದಶಕದಲ್ಲಿ. ಆದ್ದರಿಂದ ಅವರನ್ನು ಹಿಂದಿನ ಈ ಮುಖಂಡರೊಂದಿಗೆ ಸೇರಿಸುವಂತಿಲ್ಲ.

ಕರ್ನಾಟಕದ ಈ ಎಲ್ಲ ಸಂಗಾತಿಗಳನ್ನು ತಂತಮ್ಮ ಸ್ಥಳಗಳಿಗೆ ಹೋಗಿ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟಬೇಕು ಎಂದು ಪಕ್ಷ ಮಾರ್ಗದರ್ಶನ ನೀಡಿದ್ದರಿಂದ ಕಾಮ್ರೇಡ್ ಮಹಮ್ಮದ್ ದಸ್ತಗೀರ್ ಕುಣಿಗಲ್‍ಗೆ ಹಿಂದಿರುಗಿ ಅಲ್ಲಿ ಕೆಲಸ ಆರಂಭಿಸಿದರು.

ಆಗ ಕುಣಿಗಲ್‍ನಲ್ಲಿ ಕಟ್ಟಿದ ಪಕ್ಷ ಅಲ್ಪಸಂಖ್ಯಾತರ ನಡುವೆ ಬಲವಾದ ಬೇರು ಬಿಟ್ಟಿತು.. ನಿಜ, ಬೇರೆ ಮುಖಂಡರೂ ಇದ್ದರು. ಸಿದ್ಧಾಂತವನ್ನು ಕರತಲಾಮಲಕ ಮಾಡಿಕೊಂಡಿದ್ದ ಕೃಷ್ಣಸ್ವಾಮಿ ಎಂಬವರ ಒಡನಾಟ ಈ ಲೇಖಕನಿಗೆ ನೆನಪಾಗುತ್ತದೆ. ಅವರು ಪಕ್ಷದ ಯುವಜನಗಳಿಗೆ ಮಾರ್ಗದರ್ಶನ ನೀಡಬಲ್ಲವರಾಗಿದ್ದರು. ಅಲ್ಲಿ ಬೀಡಿ ಕಾರ್ಮಿಕರನ್ನು ಸಂಘಟಿಸಲಾಯಿತು. ಎಪ್ಪತ್ತರ ದಶಕದಲ್ಲಿ ಕುಣಿಗಲ್ ಸ್ಟಡ್ ಫಾರ್ಮಿನ ಕಾರ್ಮಿಕರ ಒಂದು ಒಳ್ಳೆಯ ಸಂಘಟನೆಯೂ ಬಂತು. ಬಹಳ ಕಾಲ ಕಾಮ್ರೇಡ್ ದಸ್ತಗೀರ್ ಸಿಐಟಿಯುನ ರಾಜ್ಯ ಉಪಾಧ್ಯಕ್ಚರಾಗಿದ್ದರು. ಕುಣಿಗಲ್ ಆಂದೋಲನ ಸಿಐಟಿಯು ಜನರಲ್ ಕೌನ್ಸಿಲ್‍ಗೆ ಮೊದಲ ಮಹಿಳಾ ಮುಖಂಡರನ್ನು ಕೊಟ್ಟಿತು.

ಆಂತರಿಕ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಕುಣಿಗಲ್‍ನಲ್ಲಿ ಪಕ್ಷ ಯಾವುದೇ ಕಾರ್ಮಿಕ ಹಕ್ಕುಗಳನ್ನು ದಮನ ಮಾಡುವುದಕ್ಕೆ ತೀವ್ರ ಪ್ರತಿರೋಧ ಒಡ್ಡಿತು. ಹಲವೆಡೆಗಳಲ್ಲಿ ಕಾರ್ಮಿಕರು ಮತ್ತು ಸಂಘಗಳು ಹಿಂದೆ ಸರಿದು ತುರ್ತು ಪರಿಸ್ಥಿತಿಯ ವಿರುದ್ದ ದನಿಯೆತ್ತದೇ ಇದ್ದಾಗ ಕುಣಿಗಲ್‍ನಲ್ಲಿ ಬೀಡಿ ಕಾರ್ಮಿಕರು ತಮ್ಮ ಪ್ರತಿಭಟನೆಯ ಹಕ್ಕುಗಳನ್ನು ಬಿಟ್ಟು ಕೊಡದೆ ಪೊಲೀಸ್ ಠಾಣೆಯ ಎದುರು ಹೋರಾಟ ನಡೆಸಿದರು.

ಕಾಮ್ರೇಡ್ ದಸ್ತಗೀರ್ ತುಮಕೂರಿನಿಂದ ಕೆಲಸ ನಿರ್ವಹಿಸಲಾರಂಬಿಸಿದ್ದು ತುರ್ತುಪರಿಸ್ಥಿತಿಯ ನಂತರದ ಅವಧಿಯಲ್ಲಿ. ಬೀಡಿ ಕಾರ್ಮಿಕರ ಆಂದೋಲನವಲ್ಲದೆ, ಇಲ್ಲಿ ಮುನಿಸಿಪಲ್ ಕಾರ್ಮಿಕರ ಒಂದು ಬಲಿಷ್ಟ ಆಂದೋಲನ ಬೆಳೆಯಿತು. ಕುಣಿಗಲ್ ಕಾರ್ಮಿಕರಂತೆ, ತುಮಕೂರು ಕಾರ್ಮಿಕರು ಪಕ್ಷದ ಕಡೆಗೆ ಸಾಧ್ಯವಾಗಬಹುದಾದಷ್ಟು ರೀತಿಯಲ್ಲಿ ಬರಲಿಲ್ಲ. ತುಮಕೂರು ಮುನಿಸಿಪಲ್ ಚುನಾವಣೆಗಳಲ್ಲಿ ಬಂದ ಬಹಳ ಕಡಿಮೆ ಮತಗಳಿಂದ ಕಾಮ್ರೇಡ್ ಕೆ.ಆರ್. ನಾಯಕ್ ಭ್ರಮನಿರಸನಗೊಂಡಿದ್ದರು.

ಕಮ್ಯುನಿಸ್ಟ್ ಪಕ್ಷದ ವಿಭಜನೆಯ ಮೊದಲು ಆಂದೋಲನ ಹಲವು ತಾಲೂಕುಗಳಿಗೆ ಹರಡಿತ್ತು. ಅಮ್ಮಸಂದ್ರದಲ್ಲಿ ಸಿಮೆಂಟ್ ಕಾರ್ಮಿಕರನ್ನು ಸಂಘಟಿಸಲಾಗಿತ್ತು. ತಿಪಟೂರಿನಲ್ಲಿ ಮುನಿಸಿಪಲ್ ಕಾರ್ಮಿಕರನ್ನು ಸಂಘಟಿಸಲಾಯಿತು. ಗುಬ್ಬಿ, ಕಳ್ಳಂಬೆಳ್ಳ ಮುಂತಾದೆಡೆಗಳಲ್ಲಿ ರೈತ ಆಂದೋಲನ ಸಾಕಷ್ಟು ಬಲಿಷ್ಟವಾಗಿತ್ತು.

ಈ ಎಲ್ಲ ಸ್ಥಳಗಳಲ್ಲಿ ಬೀಡಿ ಕಾರ್ಮಿಕರೊಂದಿಗೆ ಕಾಮ್ರೇಡ್ ದಸ್ತಗೀರ್ ಸಂಪರ್ಕ ಆಳವಾಗಿತ್ತು. ಅವರು ಈ ಕಾರ್ಮಿಕರ ನಡುವೆಯೇ ಬದುಕಿ ಕೆಲಸ ಮಾಡುತ್ತಿದ್ದರು. ಅದೇ ಕಾಲಕ್ಕೆ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ತುಮಕೂರು ಜಿಲ್ಲೆಯ ಸಿರಾ ಮತ್ತು ಹರಿಹರದಲ್ಲೂ ಅವರು ಜನಪ್ರಿಯರಾಗಿದ್ದರು. ಕ್ರಮೇಣ ಪಕ್ಷ ಕಿರಿಯ ಮುಖಂಡರನ್ನು ಬೆಳೆಸಿದೆ, ಅವರೀಗ ಈ ಚಳುವಳಿಯನ್ನು ಉಳಿಸಲು, ಬೆಳೆಸಲು ಕೆಲಸ ಮಾಡುತ್ತಿದ್ದಾರೆ.

 

 

ಎಪ್ಪತ್ತರ ದಶಕದಲ್ಲಿ ಕಾಮ್ರೇಡ್ ದಸ್ತಗೀರ್ ಅವರ ಕಿರಿಯ ಸೋದರ ತನ್ನ ಹಿರಿಯಣ್ಣನ ನೆರವಿನಿಂದ ಅಶೋಕ ಬೀಡಿ ವಕ್ರ್ಸ್ ಆರಂಭಿಸಿದರು. ಸ್ವಲ್ಪ ಸಮಯ ದಸ್ತಗೀರ್ ನೆಲಮಂಗಲದ ಬಳಿ ಗ್ರಾಮೀಣ ಪ್ರದೇಶವೊಂದರಲ್ಲಿ ತಮ್ಮ ಅವರಿಗಾಗಿ ಖರೀದಿಸಿಕೊಟ್ಟ ಜಾಗದಲ್ಲಿ ನೆಲೆಸಿದರು. ಆದರೆ ಅಲ್ಲಿ ಸರಿಬರದೆ ಅವರು ತನ್ನ ಕುಟುಂಬವನ್ನು ಬೆಂಗಳೂರಿಗೆ ಸ್ಥಳಾಂತರಿಸಿದರು, ಅದೇ ವೇಳೆಗೆ ತುಮಕೂರಿನಲ್ಲಿ ಕೆಲಸ ಮುಂದುವರೆಸಿದರು.

ಕೊನೆಯ ವೇಳೆಗೆ ಕಾಮ್ರೇಡ್ ದಸ್ತಗೀರ್ ತಮ್ಮನ ಆರೈಕೆಯಲ್ಲಿ ಇದ್ದರು. ಅಲ್ಲಿಯೇ ಅವರು ಕೊನೆಯುಸಿರೆಳೆದರು. ನವಂಬರ್ 14ರಂದು ಮೈಸೂರು ರಸ್ತೆ ಸ್ಮಶಾನದಲ್ಲಿ ಅವರನ್ನು ಸಮಾಧಿ ಮಾಡಲಾಯಿತು. ಮೇಲೆ ಹೇಳಿದಂತೆ ಕಾಮ್ರೇಡ್ ದಸ್ತಗೀರ್ ಮುಂಬೈಯಲ್ಲಿ ಕಮ್ಯುನಿಸ್ಟರಾಗಿ ತಮ್ಮ ಊರುಗಳಲ್ಲಿ ಕೆಲಸ ಮಾಡಲು ಕಳಿಸಲ್ಪಟ್ಟ ಮುಖಂಡರಲ್ಲಿ ಕೊನೆಯವರು. ಇಲ್ಲಿ ಹೆಸರಿಸಿದ ಬೇರೆಲ್ಲ ಮುಖಂಡರು ಈಗಾಗಲೇ ನಿಧನರಾಗಿದ್ದಾರೆ.

 

 

ವಿ.ಜೆ.ಕೆ. ನಾಯರ್