ಉನ್ನತ ಶಿಕ್ಷಣದಲ್ಲಿ ಮೀಸಲಾತಿ: ಸುಪ್ರಿಂಕೋರ್ಟ್ ಟಿಪ್ಪಣಿ ಒಪ್ಪತಕ್ಕಂತದ್ದಲ್ಲ

ಸಂಪುಟ: 
9
ಸಂಚಿಕೆ: 
45
Sunday, 1 November 2015

ರಾಷ್ಟ್ರೀಯ ಹಿತದೃಷ್ಟಿಯಿಂದ ಉನ್ನತ ಶಿಕ್ಷಣದಲ್ಲಿ ಎಲ್ಲ ರೀತಿಯ ಮೀಸಲಾತಿಗಳನ್ನು ತೆಗೆದು ಹಾಕಬೇಕು ಎಂದು ಅಕ್ಟೋಬರ್ 27ರಂದು ಸುಪ್ರಿಂ ಕೋರ್ಟ್ನ ಇಬ್ಬರು ನ್ಯಾಯಾಧೀಶರ ಪೀಠ ಹೇಳಿದೆ. ಈ ಬಗ್ಗೆ ‘ವಸ್ತುನಿಷ್ಟವಾಗಿ’ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರಕಾರವನ್ನು ಅದು ಆಗ್ರಹಿಸಿದೆ.

ಈ ವಿಶೇಷ ಸೌಲಭ್ಯ ಅನಂತ ಕಾಲದ ವರೆಗೆ ಇರುವಂತೆ ಕಾಣುತ್ತದೆ ಎಂದು ತೀರ್ಪಿನಲ್ಲಿ ಟಿಪ್ಪಣಿ ಮಾಡಲಾಗಿದೆ ಎಂದು ವರದಿಯಾಗಿದೆ. ಸುಪ್ರಿಂ ಕೋರ್ಟ್ ಪೀಠ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಬಗ್ಗೆ ಮಾಡಿರುವ ಇಂತಹ ಟಿಪ್ಪಣಿಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ‘ದಲಿತ ಶೋಷಣ ಮುಕ್ತಿ ಮಂಚ್'(ಡಿಎಸ್ಎಂಎಂ) ಒಂದು ಹೇಳಿಕೆಯಲ್ಲಿ ಅಭಿಪ್ರಾಯ ಪಟ್ಟಿದೆ.

ನ್ಯಾಯಪೀಠ ಸಂವಿಧಾನದ ಸಾಮಾಜಿಕ ನ್ಯಾಯದ ನೀತಿಯ ವಿರುದ್ಧ ಹೋಗುವ ಟಿಪ್ಪಣಿಗಳನ್ನು ಮಾಡಿದೆ, ಇಂದೂ ಕೂಡ ಜಾತಿ ದಮನ ಮತ್ತು ತಾರತಮ್ಯ ಶಿಕ್ಷಣದ ಎಲ್ಲ ಮಟ್ಟಗಳಲ್ಲಿ, ಎಲ್ಲ ಮೂಲೆಗಳಲ್ಲೂ ನಮ್ಮನ್ನು ಬಾಧಿಸುತ್ತಿದೆ. ಇಂತಹ ದುಷ್ಟತೆಗಳನ್ನು ದೇಶದಿಂದ ಬುಡ ಸಹಿತ ಕಿತ್ತು ಹಾಕದೆ, ಪ್ರತಿಯೊಬ್ದರಿಗೆ ಸಮಾನ ಅವಕಾಶಗಳನ್ನು, ಮತ್ತು ಈ ಅವಕಾಶಗಳನ್ನು ಬಳಸಿಕೊಳ್ಳಲು ಸಂಪನ್ಮೂಲಗಳನ್ನು, ಸಾಮಾಜಿಕ ಸ್ಥಾನಮಾನವನ್ನು ಲಭ್ಯಗೊಳಿಸುವ ವರೆಗೆ ‘ಪ್ರತಿಭೆಯ ಪಾರಮ್ಯ’ದ ಬಗ್ಗೆ ಕೇವಲ ಮಾತಾಡುತ್ತಿದ್ದರೆ ಅದು ಯಾವ ಪ್ರಜಾಪ್ರಭುತ್ವವಾದಿ ವ್ಯಕ್ತಿಗೂ ಮನವರಿಕೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲ ಪ್ರಜಾಪ್ರಭುತ್ವವಾದಿ ನಿಲುವಿನ ವ್ಯಕ್ತಿಗಳು ಮತ್ತು ಬುದ್ಧಿಜೀವಿಗಳು ಮೀಸಲಾತಿಯನ್ನು ಯಾವುದೇ ರೀತಿಯಲ್ಲಿ ದುರ್ಬಲಗೊಳಿಸುವುದನ್ನು ಪ್ರತಿರೋಧಿಸಬೇಕು ಎಂದು ಡಿಎಸ್ಎಂಎಂನ ಕೆ.ಎಸ್. ರಾಧಾಕೃಷ್ಣನ್ ಅವರು ನೀಡಿರುವ ಹೇಳಿಕೆ ಕರೆ ನೀಡಿದೆ.