Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಅಸಹಿಷ್ಣುತೆಯ ವಾತಾವರಣ:

ಸಂಪುಟ: 
9
ಸಂಚಿಕೆ: 
45
Sunday, 1 November 2015

334 ಕಲಾವಿದರು, 9 ಚಿತ್ರ ನಿರ್ದೇಶಕರು, 53 ಇತಿಹಾಸಕಾರರು, ಮತ್ತೀಗ 600ಕ್ಕೂ ಹೆಚ್ಚು ವಿಜ್ಞಾನಿಗಳ ತೀವ್ರ ಆತಂಕ - ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಬಗ್ಗೆ ಕೆಲವು ಪ್ರತಿಷ್ಠಿತ ಲೇಖಕರು ತಮ್ಮ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಹಿಂದಿರುಗಿಸುವುದರೊಂದಿಗೆ ಆರಂಭವಾಗಿರುವ ಪ್ರತಿಭಟನೆ ಈಗ ಒಂದು ಮಹಾಪೂರದ ಸ್ವರೂಪ ಪಡೆಯುತ್ತಿದೆ. ಈ ಬೆಳೆಯುತ್ತಿರುವ ಪಟ್ಟಿಗೆ ಇತ್ತೀಚಿನ ಸೇರ್ಪಡೆಯೆಂದರೆ ದೇಶದ ಪ್ರಮುಖ ವಿಜ್ಞಾನಿಗಳು.

ದೇಶದಲ್ಲಿನ ಅಸಹಿಷ್ಣುತೆಯ ವಾತಾವರಣ ಮತ್ತು ವಿಜ್ಞಾನ ಹಾಗೂ ತರ್ಕವನ್ನು ಕೊರೆದು ಹಾಕಲಾಗುತ್ತಿರುವ ರೀತಿಗಳ ಬಗ್ಗೆ ವೈಜ್ಞಾನಿಕ ಸಮುದಾಯಕ್ಕೆ ಆಳವಾದ ಕಳವಳ ಉಂಟಾಗಿದೆ. ಈ ಅಸಹಿಷ್ಣುತೆಯ ವಾತಾವರಣವೇ, ಮತ್ತು ತರ್ಕದ ಬಗ್ಗೆ ತಿರಸ್ಕಾರವೇ ದಾದ್ರಿಯಲ್ಲಿ ಮಹಮ್ಮದ್ ಅಖ್ಲಾಕ್ ಸೈಫಿಯನ್ನು ಚಚ್ಚಿ ಹಾಕುವುದಕ್ಕೆ, ಮತ್ತು ಪ್ರೊ. ಕಲಬುರ್ಗ, ಡಾ.ನರೇಂದ್ರ ಧಬೋಲ್ಕರ್ ಮತ್ತು ಶ್ರೀ ಗೋವಿಂದ ಪನ್ಸಾರೆಯವರ ಹತ್ಯೆಗಳಿಗೆ ಕಾರಣವಾಗಿದೆ ಎಂದಿರುವ ಜಂಟಿ ಹೇಳಿಕೆಗೆ 100ಕ್ಕೂ ಹೆಚ್ಚು ವಿಜ್ಞಾನಿಗಳು ಸಹಿ ಮಾಡಿದ್ದಾರೆ.

Manjul DNAಭೌತಶಾಸ್ತ್ರಕ್ಕೆ ಜಗತ್ತಿನ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಪಡೆದಿರುವ ಅಶೋಕ ಸೆನ್, ಹೈದರಾಬಾದಿನ ಪ್ರತಿಷ್ಠಿತ ವೈಜ್ಞಾನಿಕ ಸಂಶೋಧನಾ ಸಂಸ್ಥ್ಲೆ ‘ಸೆಂಟರ್ ಫಾರ್ ಸೆಲ್ಯುಲರ್ ಅಂಡ್ ಮೊಲಿಕ್ಯುಲರ್ ಬಯಾಲಜಿ'(ಸಿಸಿಎಂಬಿ) ಸ್ಥಾಪಕ ಪುಷ್ಪ್ ಭಾರ್ಗವ್, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕ ಪಿ.ಬಲರಾಂ,, ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್ನ ಮಾಜಿ ಅಧ್ಯಕ್ಷ ಡಿ. ಬಾಲಸುಬ್ರಮಣ್ಯಂ ಈ ಜಂಟಿ ಹೇಳಿಕೆಗೆ ಸಹಿ ಮಾಡಿದವರಲ್ಲಿ ಸೇರಿದ್ದಾರೆ.

ಇವರಲ್ಲಿ ಹಲವರು ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ ಪಡೆದವರು. ಪ್ರೊ. ಪುಷ್ಪ್ ಭಾರ್ಗವ ಅವರು ತಮ್ಮ ಪದ್ಮಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಪ್ರಕಟಿಸಿದ್ದಾರೆ. ಈ ಹೇಳಿಕೆಯನ್ನು ನಂತರ ಅಂತರ್ಜಾಲದಲ್ಲಿ ಹಾಕಲಾಯಿತು. ಇದಕ್ಕೆ ಈ ಸಂಚಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಎರಡೇ ದಿನಗಳಲ್ಲಿ 631 ವಿಜ್ಞಾನಿಗಳು ಸಹಿ ಮಾಡಿದ್ದಾರೆ.

ವಿಜ್ಞಾನಿಗಳು ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಹೇಳುವುದಿಲ್ಲ. ಅಂತವರೂ, ಸಾಮಾನ್ಯವಾಗಿ ಸಾಮಾಜಿಕ-ರಾಜಕೀಯ ಪ್ರಶ್ನೆಗಳಿಗೆ ಸ್ಪಂದಿಸದವರೂ ಮಾತನಾಡಬೇಕಾಗಿ ಬಂದಿರುವುದು ಈ ಕಳವಳ ಎಷ್ಟು ಆಳವಾಗಿದೆ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ ಈ ಹೇಳಿಕೆಗೆ ಸಹಿ ಮಾಡಿರುವ ಡಾ.ಅಮಿತ್ ಸೆನ್ಗುಪ್ತ, ಜನತಾ ಆರೋಗ್ಯ ಆಂದೋಲನದ ರಾಷ್ಟ್ರೀಯ ಸಂಯೋಜಕರು.

ಮುಕ್ತ ಮತ್ತು ನಿರ್ಬೀತ ಅಭಿವ್ಯಕ್ತಿಯ ವಾತಾವರಣ ಇಲ್ಲವಾಗಿದೆ

ದೇಶದ 53 ಹಿರಿಯ ಇತಿಹಾಸಕಾರರು ಅಕ್ಟೋಬರ್ 29ರಂದು ಒಂದು ಹೇಳಿಕೆ ನೀಡಿ ಈ ದೇಶದಲ್ಲಿ ಈಗ ಅತ್ಯಂತ ಕಲುಷಿತ ವಾತಾವರಣ ಇದೆ ಎಂಬ ಕಳವಳ ವ್ಯಕ್ತಪಡಿಸಿದ್ದಾರೆ. ಭಿನ್ನಾಭಿಪ್ರಾಯಗಳನ್ನು ದೈಹಿಕ ಹಿಂಸಾಚಾರದ ಮೂಲಕ ಇತ್ಯರ್ಥ ಪಡಿಸುವ ಪ್ರಯತ್ನ ನಡೆದಿದೆ. ಲೇಖಕರು ಬರೆಯುವುದನ್ನು ನಿಲ್ಲಿಸಲಿ ಎಂದು ಮಂತ್ರಿಗಳು ಹೇಳುತ್ತಾರೆ. ಅಂದರೆ ಬುದ್ಧಿಜೀವಿಗಳು ಪ್ರತಿಭಟಿಸಿದರೆ ಅವರ ಬಾಯಿ ಮುಚ್ಚಿಸಲಾಗವುದು ಎಂಬ ಬೆದರಿಕೆ. ಇತಿಹಾಸಕಾರರಿಂದಂತೂ ಆಳುವವರು ಒಂದು ಉತ್ಪಾದಿತ ಇತಿಹಾಸ ಬಯಸುತ್ತಿರುವಂತೆ ಕಾಣುತ್ತದೆ. ಸರಕಾರದ ಮುಖ್ಯಸ್ಥರು (ಪ್ರಧಾನಿಗಳು) ಈಬಗ್ಗೆ ಮೌನವಾಗಿರುತ್ತಾರೆ. ಆದ್ದರಿಂದ ಪ್ರಭುತ್ವದ ಮುಖ್ಯಸ್ಥರು (ರಾಷ್ಟ್ರಪತಿಗಳು) ಒಂದಲ್ಲ ಎರಡು ಬಾರಿ ಸಾಂತ್ವನದ ಮಾತಾಡಬೇಕಾಗಿ ಬಂದಿದೆ.

ಮುಕ್ತ ಮತ್ತು ನಿರ್ಭೀತ ಅಭಿವ್ಯಕ್ತಿಯ, ಬಹುತ್ವದ ಪರಂಪರೆಯನ್ನು ಹೊಸಕಿ ಹಾಕುವುದು ಸುಲಭ, ಆದರೆ ಅದನ್ನು ನಾಶಪಡಿಸಿದ ಮೇಲೆ ಹೊಸದಾಗಿ ಕಟ್ಟುವುದು ಈಗಿನ ಅಧಿಕಾರಸ್ಥರ ಅಳವಿಗೆ ಮೀರಿದ್ದು ಎಂಬುದನ್ನು ಗಮನಿಸಬೇಕು ಎಂದು ಈ ಇತಿಹಾಸಕಾರರು ಎಚ್ಚರಿಸಿದ್ದಾರೆ. ದಿಲ್ಲಿಯ ಪ್ರೊ. ರೊಮಿಲಾ ಥಾಪರ್, ಅಲೀಗಢದ ಪ್ರೊ. ಇರ್ಫಾನ್ ಹಬೀಬ್, ಕೋಹಿಕ್ಕೋಡ್ನ ಎಂ.ಜಿ.ಎಸ್. ನಾರಾಯಣನ್, ತಿರುವನಂತಪುರದ ಕೆ.ಎನ್ ಪಣಿಕ್ಕರ್, ಕೊಲ್ಕತಾದ ಬಿ.ಡಿ.ಚಟ್ಟೋಪಾಧ್ಯಾಯ, ಮುಂಬಯಿಯ ಜೆ.ವಿ. ನಾಯಕ್, ಮಂಗಳೂರಿನ ಬಿ.ಸುರೇಂದ್ರ ರಾವ್ ಮುಂತಾದ ದೇಶದ ಎಲ್ಲೆಡೆಗಳಿಂದ ಇತಿಹಾಸಕಾರರು ಈ ಹೇಳಿಕೆಗೆ ಸಹಿ ಮಾಡಿದ್ದಾರೆ.

ಸರಕಾರ ಔಚಿತ್ಯ ಕಳಕೊಂಡಿದೆ – 330ಕ್ಕೂ ಹೆಚ್ಚು ಕಲಾವಿದರ ಹೇಳಿಕೆ

ಇದಕ್ಕೆ ಮೊದಲು ಅಕ್ಟೋಬರ್ 27 ರಂದು 330ಕ್ಕೂ ಹೆಚ್ಚು ಚಿತ್ರ ಕಲಾವಿದರು, ಕಲಾ ವಿಮರ್ಶಕರು, ಛಾಯಾಚಿತ್ರಕಾರರು ಮುಂತಾದವರು ಒಂದು ಜಂಟಿ ಹೇಳಿಕೆ ನೀಡಿ, ಆಳುವ ಪಕ್ಷದ ಸಿದ್ಧಾಂತ ಸೃಜನಾತ್ಮಕ ಮತ್ತು ಬೌದ್ಧಿಕ ಕೆಲಸಗಳ ಬಗ್ಗೆ ತಿರಸ್ಕಾರವನ್ನು ತೋರ್ಪಡಿಸಿದೆ ಎಂದಿದ್ದಾರೆ. ದೆಶದ ಸಂವಿದಾನ ಕೊಡಮಾಡಿರುವ ಎಲ್ಲ ಹಕ್ಕುಗಳು, ಸ್ವಾತಂತ್ರ್ಯಗಳು ದೇಶದ ಎಲ್ಲ ನಾಗರಿಕರಿಗೆ ಲಭ್ಯವಾಗುವಂತಾಗಬೇಕು ಎಂದು ಆಗ್ರಹಿಸಿರುವ ಈ ಕಲಾವಿದರು ಭಿನ್ನತೆಯನ್ನು ಸಹಿಸದ ಒಂದು ಸರಕಾರ, ಅಂಚಿಗೆ ತಳ್ಳಲ್ಪಟ್ಟಿರುವವರ, ದುರ್ಬಲ ನಾಗರಿಕರ ಬದುಕು ಮತ್ತು ಹಿತಗಳನ್ನು ರಕ್ಷಿಸಲಾರದ ಸರಕಾರ ಒಂದು ಪ್ರಜಾಪ್ರಭುತ್ವ ರಾಜಕಾರಣದಲ್ಲಿ ತನ್ನ ಔಚಿತ್ಯವನ್ನು ಕಳಕೊಳ್ಳುತ್ತದೆ, ಇಂತಹ ಒಮದು ಸನ್ನಿವೇಶವನ್ನು ನಾವು ಎದುರಿಸುತ್ತಿದ್ದೇವೆ ಎಂದು ಈ ಹೇಳಿಕೆ ಖೇದ ವ್ಯಕ್ತಪಡಿಸಿದೆ.

ರಾಷ್ಟ್ರೀಯ ಪ್ರಶಸ್ತಿಗಳನ್ನು ಹಿಂದಿರುಗಿಸಿ 9 ಒಂಭತ್ತು ಚಿತ್ರ ನಿರ್ದೇಶಕರ ಪ್ರತಿಭಟನೆ

ಇದರ ಮರುದಿನ ಪ್ರಖ್ಯಾತ ಡಾಕ್ಯುಮೆಂಟರಿ ಚಿತ್ರ ನಿರ್ದೇಶಕ ಆನಂದ ಪಟವರ್ಧನ್, ಬಾಲಿವುಡ್ ನಿರ್ದೇಶಕ ದಿಬಾಕರ್ ಬ್ಯಾನರ್ಜಿ ಸೇರಿದಂತೆ ಒಂಭತ್ತು ಚಿತ್ರ ನಿರ್ದೇಶಕರು ಪುಣೆಯ ಫಿಲ್ಮ್ ಇನ್ಸ್ಟಿಟ್ಯೂಟ್ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸುತ್ತ ಮತ್ತು ಮೂವರು ವಿಚಾರವಾದಿಗಳ ಹತ್ಯೆಯನ್ನು ಪ್ರತಿಭಟಿಸಿ ತಮಗೆ ನೀಡಿದ್ದ ರಾಷ್ಟ್ರೀಯ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದಾರೆ.

ಪುಣೆ ಇನ್ಸ್ಟಿಟ್ಯೂಟಿನಲ್ಲಿ ವಿದ್ಯಾರ್ಥಿಗಳಾಗಿದ್ದಾಗ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಪ್ರತೀಕ್ ವತ್ಸ್ ಮತ್ತು ವಿಕ್ರಮ್ ಪವಾರ್ ಕೂಡ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸುವುದಾಗಿ ಪ್ರಕಟಿಸಿದ್ದಾರೆ.

ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ

ನಿವೃತ್ತ ಭಾರತೀಯ ನಾವಿಕ ಪಡೆಯ ಮುಖ್ಯಸ್ಥರಾಗಿ ನಿವೃತ್ತ ರಾದ ಅಡ್ಮಿರಲ್ ಎಲ್. ರಾಮದಾಸ್ ಕೂಡ ಇತ್ತೀಚಿನ ಘನಟೆಗಳಿಂದ ಕಳವಳಗೊಂಡು ರಾಷ್ಟ್ರಪತಿಗಳಿಗೆ ಮತ್ತು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಇಂದು, ಎಂಭತ್ತು ವರ್ಷ ದಾಟಿರುವ ನಾನು ನಮ್ಮ ಸಹ-ನಾಗರಿಕರ ಮೇಲೆ, ವಿಶೇಷವಾಗಿ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ಆಕ್ರಮಣಗಳ ಘಟನೆಗಳ ಸರಣಿಯನ್ನು ನೋಡಿ ತಲೆ ತಗ್ಗಿಸುವಂತಾಗಿದೆ ಎಂದು ತಮ್ಮ ಪತ್ರದಲ್ಲಿ ಬರೆದಿರುವ ಅಡ್ಮಿರಲ್ ರಾಮದಾಸ್ ನನಗೆ ಗೊತ್ತಿರುವ ಹಿಂದೂ ಧರ್ಮ ಎಲ್ಲರನ್ನೂ ಒಳಗೊಳ್ಳುವಂತದ್ದಾಗಿತ್ತು, ವೈವಿಧ್ಯತೆಯಿಂದ ಕೂಡಿತ್ತು, ಎಲ್ಲ ಮಾನವ ಜೀವಿಗಳಿಗೆ ಪ್ರೀತಿ ಮತ್ತು ಗೌರವದ ಮೌಲ್ಯಗಳನ್ನು ಕಲಿಸಿತ್ತು. ಆದರೆ, ದೇಶಾದ್ಯಂತ ವಿಭಜನೆಯ ಮತ್ತು ಭಯದ ಜ್ವಾಲೆಯನ್ನು ಹತ್ತಿಸಿರುವ ಪ್ರಸಕ್ತ ಹಿಂದುತ್ವ ಬ್ರಾಂಡ್ ಭಾರತವನ್ನು ಸುಟ್ಟು ಹಾಕುತ್ತಿದೆ. ಅಧಿಕಾರದಲ್ಲಿರುವವರು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅಪರಾಧಗಳನ್ನು ನಿಸ್ಸಂಧಿಗ್ಧವಾಗಿ ಖಂಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.

ನಮ್ಮ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವನ್ನು ಹಾಗೂ ನಮೆಲ್ಲ ನಾಗರಿಕರಿಗೆ ಘನತೆ, ಸೋದರತ್ವ ಮತ್ತು ಸಮಾನತೆ ತರುವ ಭರವಸೆಯನ್ನು ಮತ್ತೆ ಮೂಡಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲು ನಾವು ಬಾರತದ ಜನತೆ ನಿಮ್ಮತ್ತ ನೋಡುತ್ತಿದ್ದೇವೆ ಎಂದು ಅವರು ತಮ್ಮ ಪತ್ರ ಕೊನೆಯಲ್ಲಿ ಬರೆದಿದ್ದಾರೆ.